ಮೋಹಕ ಕಿವಿಓಲೆ
ಫ್ಯಾಶನ್ ಲೋಕದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಲೇ ಇರುತ್ತವೆ. ಇಂದಿನ ಫ್ಯಾಷನ್ ನಾಳೆ ಇರೋದೇ ಇಲ್ಲ. ಹಾಗೆ ಹಳೆಯ ಫ್ಯಾಷನ್ ಗಳು ಹೊಸ ರೂಪ ,ಹೊಸ ವಿನ್ಯಾಸ ಪಡೆದು ಮತ್ತೆ ಮತ್ತೆ ಫ್ಯಾಷನ್ ಲೋಕಕ್ಕೆ ಲಗ್ಗೆ ಇಡುತ್ತಲೇ ಇರುತ್ತವೆ.
ಮಹಿಳೆಯರು ಆಭರಣ ಪ್ರಿಯರು ಎಂಬುದರಲ್ಲಿ ಎರಡು ಮಾತಿಲ್ಲ. ತಾವು ಧರಿಸುವ ಎಲ್ಲಾ ಆಭರಣಗಳಲ್ಲೂ ವಿವಿಧತೆ ಇರಬೇಕೆಂದು ಬಯಸುವುದು ಸಹಜವೇ. ಅದರಲ್ಲೂ ಕಿವಿಓಲೆ, ಕಾಲ್ಗೆಜ್ಜೆ, ಬಿಂದಿ, ನೇಲ್ಪಾಲಿಷ್ ,ಉಡುಪು ಎಲ್ಲವನ್ನು ಮ್ಯಾಚ್ ಮಾಡಿ ನೋಡಿಯೇ ಧರಿಸುತ್ತಾರೆ.ಹೀಗಿರುವಾಗ ಇಂದಿನ ಯುವ ಪೀಳಿಗೆಯ ಯುವತಿಯರು ಟ್ರೆಂಡಿಂಗ್ ನಲ್ಲಿ ಏನೇ ಇರಲಿ ಅದನ್ನೇ ಕೊಂಡು ಧರಿಸಲು ಇಷ್ಟಪಡುತ್ತಾರೆ. ಇವರೆಲ್ಲರ ಅಭಿರುಚಿಗೆ ತಕ್ಕಂತೆ ಇದೀಗ ಮರದ ಕಿವಿಓಲೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.
ಮರದ ಕಿವಿಓಲೆಗಳನ್ನು ಧರಿಸಲು ಭಾರ ಇರುವುದಿಲ್ಲ .ಸಾಕಷ್ಟು ವೈವಿಧ್ಯತೆಗಳು ಈ ಕಿವಿಓಲೆಗಳಲ್ಲಿ ಸಿಗುತ್ತವೆ. ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಹೀಗಿರುವಾಗ ಯುವ ಜನಾಂಗ ಇದರ ಆಕರ್ಷಣೆಗೆ ಒಳಗಾಗಿರುವುದು ಆಶ್ಚರ್ಯವೇನಿಲ್ಲ. ಹಿಂದಿನಿಂದಲೂ ಮರದ ಆಭರಣಗಳಿಗೆ ಎಲ್ಲಿಲ್ಲದ ಬೇಡಿಕೆ. ಅಲೆಮಾರಿಗಳು, ಕಾಡು ಜನಾಂಗದ ಮಹಿಳೆಯರು ಮರದ ತುಂಡುಗಳಿಂದ ತಯಾರಿಸಲಾದ ಮುತ್ತುಗಳನ್ನು ಪೋಣಿಸಿ ಸರ, ಬಳೆ , ಕಿವಿಯೋಲೆ ಹೀಗೆ ನಾನಾ ತರಹದ ಆಭರಣಗಳನ್ನ ಸ್ವತಹ ತಾವೇ ತಯಾರಿಸಿ ಧರಿಸುತ್ತಿದ್ದರು. ಈ ಮರದ ಆಭರಣಗಳ ಇನ್ನೊಂದು ವೈಶಿಷ್ಟ ಎಂದರೆ ಇವುಗಳ ಮೇಲೆ ಯಾವುದೇ ತರಹದ ಬಣ್ಣ ಕೂಡ ಗಟ್ಟಿಯಾಗಿ ನಿಲ್ಲುತ್ತದೆ ಇದನ್ನೇ ತಂತ್ರವಾಗಿ ಬಳಸಿಕೊಂಡ ಫ್ಯಾಶನ್ ನಿಸ್ಟ್ ಗಳು ಇದೀಗ ಸಾಕಷ್ಟು ವಿವಿಧ ವಿನ್ಯಾಸ ರೂಪ ಬಣ್ಣಗಳನ್ನು ಉಪಯೋಗಿಸಿ ಮರದ ಆಭರಣಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುತ್ತಿದ್ದಾರೆ. ಈ ಮರದ ತುಂಡಿನ ಆಭರಣಗಳು ಸಾಂಪ್ರದಾಯಿಕ ಉಡುಪಿಗೂ ಹಾಗೂ ಆಧುನಿಕ ಉಡುಪಿಗೂ ಸೈ ಎನಿಸಿಕೊಂಡಿವೆ. ಯಾವುದೇ ತರಹದ ಉಡುಪು ಧರಿಸಿದಾಗಲೂ ಮರದ ಆಭರಣ ಚೆನ್ನಾಗಿ ಒಪ್ಪುತ್ತದೆ.
ಚಿಕ್ಕ ಮರದ ತುಂಡಿನಲ್ಲಿ ತಯಾರಿಸಲಾದ ಕಿವಿಓಲೆಗಳಲ್ಲಿನ ಸೂಕ್ಷ್ಮ ಕೆತ್ತನೆಗಳು ಎಲ್ಲರ ಗಮನ ಸೆಳೆಯುತ್ತಿವೆ. ಹಾಗೆ ಈ ಕಿವಿಓಲೆಗಳು ಕಡಿಮೆ ತೂಕ ಹೊಂದಿದ್ದು ಇದನ್ನು ಧರಿಸಿದವರಿಗೆ ಕಿವಿ ನೋವಾಗುವ ಸಮಸ್ಯೆಯೇ ಇಲ್ಲ .ಹಾಗೆ ನೂಲು, ಮಣಿ, ಹ್ಯಾಂಗಿಂಗ್ ಒಳಗೊಂಡಂತೆ ತೀರ ವಿಭಿನ್ನ ಮಾದರಿಯಲ್ಲಿ ಇವುಗಳನ್ನು ರಚಿಸಲಾಗಿದೆ .ಸಾಂಪ್ರದಾಯಿಕ ಉಡುಗೆಗಳಾದ ಸೀರೆ, ಲೇಹೆಂಗ, ಗಾಗ್ರ ಮುಂತಾದ ಉಡುಪುಗಳ ಜೊತೆಗೆ ಸ್ವಲ್ಪ ದೊಡ್ಡ ಗಾತ್ರದ ದೇವತೆಯ ಚಿತ್ರ ಬಿಡಿಸಿ ಬಣ್ಣ ತುಂಬಿರುವ ಹ್ಯಾಂಗಿಂಗ್ ಕಿವಿಯೋಲೆ ತರಿಸಬಹುದು.
ಶುಭ ಸಮಾರಂಭಗಳಿಗೆ ಅನುಗುಣವಾಗಿ ಮತ್ತು ಆ ಸಮಾರಂಭಕ್ಕೆ ಧರಿಸುವ ನಮ್ಮ ಉಡುಪಿಗೆ ಅನುಗುಣವಾಗಿ ಗ್ರಾಂಡ್ ಲುಕ್ ನೀಡುವ ಕಿವಿಓಲೆಗಳನ್ನು ಧರಿಸಬಹುದು.
ಮೇಘಾ ಜಗದೀಶ್
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿನಿ