
ತಿರುವನಂತಪುರಂ: ಅಂಗನವಾಡಿಯಲ್ಲಿ ಉಪ್ಪಿಟ್ಟು ಬದಲು ಬಿರಿಯಾನಿ, ಚಿಕನ್ ಫ್ರೈ ಕೊಡ್ತೀರಾ? ಎಂಬ ಪುಟ್ಟ ಮಗುವಿನ ನಿಶ್ಕಳ್ಮಶ ಮನವಿ ಇದೀಗ ಕೇರಳ ಸರ್ಕಾರದ ಗಮನ ಸೆಳೆದಿದ್ದು, ಅಂಗನವಾಡಿ ಆಹಾರದ ಮೆನು ಪರಿಷ್ಕರಿಸುವ ಬಗ್ಗೆ ಸರ್ಕಾರ ಯೋಚನೆ ಮಾಡುತ್ತಿದೆ.
ಮಗು ಮಾಡಿದ ಮನವಿ ವೈರಲ್:
ಇಡುಕ್ಕಿ ಜಿಲ್ಲೆಯ ದೇವಿಕುಳಂ ಅಂಗನವಾಡಿಯ ಪುಟ್ಟ ‘ಶಂಕು’ ಎಂದು ಪ್ರೀತಿಯಿಂದ ಕರೆಯಲ್ಪಡುವ ಪ್ರಜುಲ್ ಎಸ್ ಸುಂದರ್, ತನ್ನ ತಾಯಿಯ ಮೊಬೈಲ್ ಕ್ಯಾಮೆರಾ ಎದುರು ತನ್ನ ಹಂಬಲವನ್ನು ಬಹಿರಂಗಪಡಿಸಿದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿ ಹರಿದಾಡುತ್ತಿದೆ.
ಈ ವಿಡಿಯೋ ಕೇರಳ ಸರ್ಕಾರದ ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ವೀಣಾ ಜಾರ್ಜ್ ಅವರ ಗಮನಕ್ಕೆ ಬಂದಿದ್ದು, ಅವರು ತಮ್ಮ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಅದನ್ನು ಹಂಚಿಕೊಂಡಿದ್ದಾರೆ. ಶಂಕುವಿನ ಮನವಿಯನ್ನು ನಾವು ಪರಿಗಣಿಸಿದ್ದೇವೆ. ಅಂಗನವಾಡಿ ಆಹಾರ ಪರಿಷ್ಕರಣೆಗೆ ಮುಂದಾಗುತ್ತಿದ್ದೇವೆ ಎಂದು ಸಚಿವೆ ಸ್ಪಷ್ಟಪಡಿಸಿದ್ದಾರೆ.
ಅಂಗನವಾಡಿ ಆಹಾರದಲ್ಲಿ ಬದಲಾವಣೆಯ ಭರವಸೆ!
ಈಗಾಗಲೇ ಅಂಗನವಾಡಿ ಮಕ್ಕಳಿಗೆ ಮೊಟ್ಟೆ, ಹಾಲು ನೀಡಲಾಗುತ್ತಿದೆ. ಆದರೆ ಹೊಸದಾಗಿ ಮತ್ತೇನನ್ನು ಸೇರಿಸಬಹುದು ಎಂಬ ಚರ್ಚೆ ಈಗ ಸರ್ಕಾರದಲ್ಲಿ ನಡೆಯುತ್ತಿದೆ. ಬಿರಿಯಾನಿ, ಚಿಕನ್ ಫ್ರೈ ಸರಕಾರದ ಮೆನುವಿನಲ್ಲಿ ಸೇರುವುದಾ? ಎಂಬ ಕುತೂಹಲ ಜನರಲ್ಲಿದೆ!
ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಪ್ರತಿಕ್ರಿಯೆ!
ಸಚಿವೆ ಪುಟ್ಟ ಮಗುವಿನ ಮನವಿಗೆ ಸ್ಪಂದಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ಪಡೆದಿದ್ದು, ಇಂತಹ ಸರಳ ಮನವಿಗೂ ಸರ್ಕಾರ ಗಮನ ಕೊಡುತ್ತದೆಯೇ? ಎಂಬ ಅಚ್ಚರಿ ಕೂಡ ವ್ಯಕ್ತವಾಗಿದೆ.