Alma Corner

ಶತಮಾನದ ಗಾಯಕ ಮೊಹಮ್ಮದ್‌ ರಫಿ..!!

                         ʼಮೊಹಮ್ಮದ್‌ ರಫಿʼ  ಭಾರತೀಯ ಸಿನಿಮಾರಂಗ, ಅದರಲ್ಲೂ ಭಾರತೀಯ ಸಿನಿರಂಗ ಕಂಡ ಸರ್ವಶ್ರೇಷ್ಠ ಗಾಯಕರಲ್ಲಿ ಒಬ್ಬರು. ರಫಿ ಕಂಠಸಿರಿಗೆ ಮಾರುಹೋಗದ ವ್ಯಕ್ತಿಗಳೇ ಇಲ್ಲ ಎನ್ನಬಹುದು. ತಮ್ಮ ಅಭೂತಪೂರ್ವ ಹಾಡುಗಾರಿಗೆ ಮತ್ತು ಅದ್ಭುತ ಕಂಠಸಿರಿಗೆ ಹೆಸರಾದ ರಫಿ ಹಾಡುಗಳೆಂದರೆ, ಹುಚ್ಚೆದ್ದು ಕುಣಿಯುವ ಅಭಿಮಾನಿಗಳ ಬಳಗವೇ ಇತ್ತು, ಈಗಲೂ ಕೂಡ ಇದೆ! ಇಂತಹ ಮೊಹಮ್ಮದ್‌ ರಫಿ ಜನಿಸಿ, ಈ ಡಿಸೆಂಬರ್‌ 24ಕ್ಕೆ ಭರ್ತಿ ನೂರು ವರುಷ, ಅಂದರೆ ಜನ್ಮ ಶತಮಾನೋತ್ಸವ!!

                    ರೊಮ್ಯಾಂಟಿಕ್‌ ಹಾಡುಗಳು, ಶೋಕ ಗೀತೆಗಳು, ನೃತ್ಯ ಗೀತೆಗಳು, ದೇಶಭಕ್ತಿ ಗೀತೆಗಳು, ಭಕ್ತಿಗೀತೆಗಳು, ಭಜನೆಗಳು, ಖವ್ವಾಲಿ, ಗಝಲ್…‌ ಹೀಗೆ ರಫಿ ಹಾಡದೇ ಇರುವ ಗಾಯನದ ಪ್ರಕಾರಗಳೇ ಇಲ್ಲ! ಹಿಂದಿ, ಉರ್ದು, ಪಂಜಾಬಿ, ಕನ್ನಡ, ತಮಿಳು, ತೆಲುಗು, ಗುಜರಾತಿ, ಬೆಂಗಾಲಿ, ಮರಾಠಿ ಹೀಗೆ ಬಹುತೇಕ ಭಾರತೀಯ ಭಾಷೆಗಳಲ್ಲಿ ಮತ್ತು ಇಂಗ್ಲೀಷ್‌, ಪರ್ಷಿಯನ್‌ʼ ಅರೇಬಿಕ್‌, ಸಿಂಹಳ ಮುಂತಾದ ವಿದೇಶೀ ಭಾಷೆಗಳೂ ಸೇರಿದಂತೆ, ಒಟ್ಟೂ 7000ಕ್ಕೂ ಹೆಚ್ಚು ಹಾಡುಗಳನ್ನು ಮೊಹಮ್ಮದ್‌ ರಫಿ ಹಾಡಿದ್ದಾರೆ. ಚಿತ್ರದ ಹಾಡುಗಳಲ್ಲಿ ನಟಿಸುವ ನಟರಿಗೆ ತಕ್ಕಂತೆ ತನ್ನ ಧ್ವನಿಯಲ್ಲಿ ಹಾಗೂ ಗಾಯನದ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವ ವಿಶಿಷ್ಟ ಕಲೆ ರಫಿಗೆ ಸಿದ್ಧಿಸಿತ್ತು. ಒಬ್ಬೊಬ್ಬ ನಟರಿಗೂ ರಫಿಯ ಹಿನ್ನಲೆ ಗಾಯನ ಯಾವ ರೀತಿ ಇರುತ್ತಿತ್ತುಎಂದರೆ, ಸ್ವತಃ ಆ ನಟರೇ ಹಾಡು ಹಾಡುತ್ತಿದ್ದರೇನೋ ಎನ್ನಿಸುವಷ್ಟು ನೈಜವಾದ ಚಿತ್ರಣ ತೆರೆಯ ಮೇಲೆ ಮೂಡುತ್ತಿತ್ತು. ಅದು ರಫಿಯ ಹಾಡುಗಾರಿಕೆಗಿದ್ದ ತಾಕತ್ತು!

                  ಮೊಹಮ್ಮದ್‌ ರಫಿ ಜನಿಸಿದ್ದು, 24 ಡಿಸೆಂಬರ್‌ 1924ರಂದು ಇವತ್ತಿನ ಪಂಜಾಬ್‌ʼನ ʼಕೋಟ್ಲಾ ಸುಲ್ತಾನ್‌ ಸಿಂಗ್‌ʼ ಎನ್ನುವ ಹಳ್ಳಿಯಲ್ಲಿ. ಹಾಜಿ ಅಲಿ ಮೊಹಮ್ಮದ್‌ ಮತ್ತು ಅಲ್ಲಾ ರಾಖಿ ಎನ್ನುವ ದಂಪತಿಗಳ ಏಳು ಮಕ್ಕಳ ಪೈಕಿ ರಫಿ ಎರಡನೇಯವರು. ಬಾಲ್ಯದಲ್ಲಿ ಹಳ್ಳಿಯ ಬೀದಿಗಳಲ್ಲಿ ತಿರುಗುತ್ತಿದ್ದ ಫಕೀರರ ಮಾತುಗಳನ್ನು ರಫಿ ಅನುಕರಿಸುತ್ತಿದ್ದರು. 1935ರಲ್ಲಿ ರಫಿಯ ತಂದೆ ಲಾಹೋರ್ʼಗೆ ಸ್ಥಳಾಂತರಗೊಂಡಿದ್ದರಿಂದ, ರಫಿ ಕೂಡಾ ಲಾಹೋರ್‌ʼಗೆ ಸ್ಥಳಾಂತರವಾಗಬೇಕಾಗಿ ಬಂತು.

                  ರಫಿ ತಮ್ಮ 13ನೇ ವಯಸ್ಸಿನಲ್ಲಿ ಲಾಹೋರ್‌ʼನ ಕಾರ್ಯಕ್ರಮದಲ್ಲಿ ಹಾಡುವುದರ ಮುಖಾಂತರ ತಮ್ಮ ಗಾಯನ ಪಯಣವನ್ನು ಶುರುಮಾಡಿದರು. 1944ರಲ್ಲಿ ಪಂಜಾಬ್‌ ಚಿತ್ರ ʼಗುಲ್‌ ಬಲೋಚ್‌ʼಗೆ ಹಾಡುವುದರ ಮುಖಾಂತರ, ಅಧಿಕೃತವಾಗಿ ಹಿನ್ನಲೆ ಗಾಯಕರಾಗಿ ಚಿತ್ರರಂಗಕ್ಕೆ ಪರಿಚಿತವಾದರು. 1944ರಲ್ಲಿ ರಫಿ ಬಾಂಬೆಗೆ ಸ್ಥಳಾಂತರವಾದಾಗ, ಸಂಗೀತ ನಿರ್ದೇಶಕ ಶ್ಯಾಮ್‌ ಸುಂದರ್‌ ಅವರ ಪರಿಚಯವಾಯಿತು. 1945ರಲ್ಲಿ ಶ್ಯಾಮ್‌ ಸುಂದರ್‌ ತಮ್ಮ ಸಂಗೀತ ನಿರ್ದೇಶನದ ʼಗಾವೋನ್‌ ಕಿ ಗೋರಿʼ ಎಂಬ ಹಿಂದಿ ಚಿತ್ರದಲ್ಲಿ ಹಾಡಲು ಅವಕಾಶ ನೀಡಿದರು. ಅಲ್ಲಿಂದ ಬಾಲಿವುಡ್‌ʼನಲ್ಲಿ ಹಿನ್ನಲೆ ಗಾಯಕರಾಗಿ ರಫಿಯ ಸಂಗೀತಯಾನ ಆರಂಭವಾಯಿತು.

               ನಂತರ ಹೆಸರಾಂತ ಗಾಯಕರಾಗಿ ಪ್ರಖ್ಯಾತರಾಗುತ್ತಾ ಸಾಗುತ್ತಾ ರಫಿ, ಯಶಸ್ಸಿನ ಉನ್ನತಿಗೆ ಏರಿದರು. ಸರಿಸುಮಾರು 70ರ ದಶಕದವೆರಗೂ ರಫಿ ಅಕ್ಷರಶಃ ಬಾಲಿವುಡ್‌ ಸಂಗೀತ ಪ್ರಪಂಚವನ್ನು ಆಳಿದ್ದಾರೆ. ಹಿನ್ನಲೆ ಗಾಯಕರಾಗಿ ರಫಿ, ಲಕ್ಷೀಕಾಂತ್-ಪ್ಯಾರೇಲಾಲ್‌, ರವಿ, ಮದನ್‌ ಮೋಹನ್‌, ಓ.ಪಿ ನಯ್ಯರ್‌, ಕಲ್ಯಾನ್‌ ಜಿ, ಆನಂದ್‌ ಜಿ, ರಾಜೇಶ್‌ ರೋಷನ್‌, ಬಪ್ಪಿ ಲಾಹಿರಿ ಹೀಗೆ ತಮ್ಮ ಸಮಕಾಲೀನ ಬಹುತೇಕ ಸಂಗೀತ ನಿರ್ದೇಶಕರ ಜೊತೆ ಕೆಲಸ ಮಾಡಿದ್ದಾರೆ. ಮನ್ನಾ ಡೇ, ಆಶಾ ಭೊಸ್ಲೆ, ಲತಾ ಮಂಗೇಶ್ಕರ್‌ ಮೊದಲಾದ ಪ್ರಖ್ಯಾತ ಹಿನ್ನೆಲೆ ಗಾಯಕರ ಜೊತೆಯೂ ಕೆಲಸ ಮಾಡಿದ್ದಾರೆ. ಕೇವಲ ಚಿತ್ರಗೀತೆಗಳಲ್ಲದೇ ಕೆಲವು ಆಲ್ಬಮ್‌ ಹಾಡುಗಳಿಗೂ ರಫಿ ದನಿಯಾಗಿದ್ದಾರೆ.

               ಬೈಜು ಬಾವ್ರಾ, ಕಾಗಜ್‌ ಕೆ ಫೂಲ್‌, ಕಾಲಾ ಬಜಾರ್‌, ಗೈಡ್‌, ಆರಾಧನಾ, ಆವಾರಾ, ಲವ್‌ ಇನ್‌ ಟೋಕ್ಯೋ, ನೀಲ್‌ ಕಮಲ್‌, ಕಶ್ಮೀರ್‌ ಕಿ ಕಲಿ, ದೋಸ್ತ್‌, ಅಮರ್‌ ಅಕ್ಬರ್‌ ಆಂಟನಿ, ಧರಮ್‌ ವೀರ್‌, ಸುಹಾಗ್‌, ಅಪ್ನಾ ಪನ್‌, ದೋಸ್ತಾನಾ, ಕರ್ಜ್‌, ನಸೀಬ್‌, ಇವು ರಫಿ ಹಿನ್ನಲೆ ಗಾಯಕರಾಗಿ ಕೆಲಸ ಮಾಡಿರುವ ಕೆಲವು ಪ್ರಖ್ಯಾತ ಚಿತ್ರಗಳು. ರಫಿ ತಮ್ಮ ಹಿನ್ನಲೆ ಗಾಯನಕ್ಕಾಗಿ ಒಟ್ಟೂ 6 ಬಾರಿ ಫಿಲಂಫೇರ್‌ ಪ್ರಶಸ್ತಿ, ಒಂದು ರಾಷ್ಟ್ರೀಯ ಪ್ರಶಸ್ತಿ, BFJA ಶ್ರೇಷ್ಠ ಹಿನ್ನಲೆ ಗಾಯಕ ಪ್ರಶಸ್ತಿ ಹೀಗೆ ಹತ್ತು ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.

                    ರಫಿಯವರು  ಎರಡು  ವಿವಾಹವಾಗಿದ್ದು, ಅವರಿಗೆ 7 ಜನ ಮಕ್ಕಳಿದ್ದಾರೆ. ಸುಮಾರು 70ರ ದಶಕದ ಕೊನೆಯವರೆಗೂ ಬಾಲಿವುಡ್‌ʼನ ಶ್ರೇಷ್ಠ ಹಾಡುಗಾರರಲ್ಲಿಒಬ್ಬರಾಗಿ ಮೆರೆದ ಮೊಹಮ್ಮದ್‌ ರಫಿ, 31 ಜುಲೈ 1980ರಂದು ಮುಂಬೈನಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದರು.

              ಸಂಗೀತ ಕ್ಷೇತ್ರದಲ್ಲಿನ ಸಾಧನೆಗಾಗಿ ರಫಿ ಅವರಿಗೆ 2001ರಲ್ಲಿ, ಭಾರತ ಸರ್ಕಾರ ಮರಣೋತ್ತರವಾಗಿ ʼಪದಶ್ರೀʼ ಪ್ರಶಸ್ತಿ ನೀಡಿ ಗೌರವಿಸಿದೆ. 2013ರಲ್ಲಿ ಹೀರೋಹೊಂಡಾ ಮತ್ತು ಸ್ಟಾರ್‌ ಟಸ್ಟ್‌ ಮ್ಯಾಗಜೀನ್‌ ಜಂಟಿಯಾಗಿ, ರಫಿಯವರಿಗೆ ʼಶತಮಾನದ ಶ್ರೇಷ್ಠ ಗಾಯಕʼ ಬಿರದು ನೀಡಿವೆ. ರಫಿ ನೆನಪಿಗಾಗಿ 2007ರಲ್ಲಿ ಯುಕೆಯಲ್ಲಿ ಅವರ ಸಮಾಧಿ ನಿರ್ಮಿಸಲಾಗಿದೆ. 2015ರಲ್ಲಿ ಯುಕೆ ಮೂಲದ ಪತ್ರಿಕೆ ʼಈಸ್ಟರ್ನ್‌ ಐʼ ಎಂಬ ಪತ್ರಿಕೆ ರಫಿಯವರನ್ನು ʼ20 ಜನ ಸಾರ್ವಕಾಲಿಕ ಬಾಲಿವುಡ್‌ ಹಾಡುಗಾರʼರ ಪಟ್ಟಿಗೆ ಸೇರಿಸಿದೆ. 2016ರಲ್ಲಿ ಭಾರತ ಸರ್ಕಾರ ರಫಿ ಸ್ಮರಣಾರ್ಥವಾಗಿ ಅಂಚೆ ಚೀಟಿಯನ್ನೂ ಬಿಡುಗಡೆ ಮಾಡಿದೆ.

ಗಜಾನನ ಭಟ್‌

ಆಲ್ಮಾ ಮೀಡಿಯಾ ಸ್ಕೂಲ್‌ ವಿದ್ಯಾರ್ಥಿ

Show More

Leave a Reply

Your email address will not be published. Required fields are marked *

Related Articles

Back to top button