
ಶ್ರೀನಗರ: ಜಮ್ಮು-ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ 5 ಉಗ್ರರನ್ನು ಹೊಡೆದುರುಳಿಸಲಾಗಿದೆ. ಈ ವಿಶೇಷ ಕಾರ್ಯಾಚರಣೆ ಗುರುವಾರ ಮುಂಜಾನೆ ಪ್ರಾರಂಭವಾಗಿದ್ದು, ಕುಲ್ಗಾಮ್‌ನ ಘದೋಲ್ ಪ್ರದೇಶದಲ್ಲಿ ನಡೆದಿದೆ.
ಭದ್ರತಾ ಪಡೆಗಳಿಗೆ ಉಗ್ರರು ಅಡಗಿಕೊಂಡಿರುವ ಮಾಹಿತಿ ಲಭ್ಯವಾದ ಬಳಿಕ ಕಾರ್ಯಾಚರಣೆ ಆರಂಭಗೊಂಡಿತು. ಸ್ಥಳವನ್ನು ಸುತ್ತುವರೆದು ಶೋಧ ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ಉಗ್ರರು ಗುಂಡು ಹಾರಿಸಲು ಪ್ರಾರಂಭಿಸಿದರು. ಅದಕ್ಕೆ ಪ್ರತಿಯಾಗಿ ಭದ್ರತಾ ಪಡೆಗಳು ಈ ಉಗ್ರರನ್ನು ಹೊಡೆದುರುಳಿಸಿವೆ.
ಈ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ನಿವಾಸಿಗಳ ಭದ್ರತೆಗೆ ಹೆಚ್ಚಿನ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ. ಉಗ್ರರಿಂದ ಶಸ್ತ್ರಾಸ್ತ್ರಗಳನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿದ್ದು, ಅಲ್ಲಿಯ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಟ್ಟಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ಉಗ್ರ ಕೃತ್ಯಗಳನ್ನು ತಡೆಯುವ ಸಂಬಂಧ ಭದ್ರತಾ ಪಡೆಗಳು ಕಠಿಣ ಕ್ರಮ ಕೈಗೊಳ್ಳುತ್ತಿದೆ. ಈ ಎನ್‌ಕೌಂಟರ್ ನಂತರ ಕಣಿವೆ ರಾಜ್ಯದಲ್ಲಿ ಭದ್ರತಾ ಪಡೆಗಳ ಪ್ರಾಬಲ್ಯ ಹೆಚ್ಚಿಸಲಾಗಿದೆ.