Alma Corner

ತುಪ್ಪ: ಆರೋಗ್ಯದಿಂದ ಸೌಂದರ್ಯದವರೆಗೂ…!

     ಸಾಕಷ್ಟು ಜನರು ತುಪ್ಪ ಸೇವನೆ ಬಗ್ಗೆ ತಪ್ಪು ಕಲ್ಪನೆ ಹೊಂದಿದ್ದಾರೆ, ತುಪ್ಪವು ಕೊಬ್ಬಿನಾಂಶದಿಂದ ಕೂಡಿದ್ದು ಇದರ ಸೇವನೆಯಿಂದ ದೇಹದಲ್ಲಿ ಕೊಬ್ಬು ಹೆಚ್ಚಾಗುತ್ತದೆ ಎಂದು. ಅದರಲ್ಲೂ ದೇಹದ ಆರೋಗ್ಯ ಹಾಗೂ ಸೌಂದರ್ಯದ ಬಗ್ಗೆ ಕಾಳಜಿ ವಹಿಸುವವರೇ ತುಪ್ಪದಿಂದ ದೂರವಾಗಿದ್ದಾರೆ. ಆದರೆ, ತುಪ್ಪ ಸೇವನೆ ನಮ್ಮ ದೇಹದ ಆರೋಗ್ಯ ಹಾಗೂ ತ್ವಚೆಯನ್ನು ಹೆಚ್ಚು ಸುರಕ್ಷಿತವಾಗಿಸುತ್ತದೆ ಎಂಬುದನ್ನೇ ತಿಳಿದಿಲ್ಲ.

     ತುಪ್ಪ ರುಚಿಯಲ್ಲಿ ಎಷ್ಟು ಅತ್ಯುತ್ತಮವೋ, ಆರೋಗ್ಯ ಕಾಪಾಡುವಿಕೆಯಲ್ಲೂ ಸಹ ಅಷ್ಟೇ ಉತ್ತಮವಾಗಿದೆ. ಮಕ್ಕಳಿಂದ ಹಿಡಿದು ಇಳಿವಯಸ್ಸಿನವರೂ ಸಹ ತುಪ್ಪ ಸೇವನೆ ಮಾಡುವುದು ಅತ್ಯವಶ್ಯಕ. ಆದರೆ ತುಪ್ಪದ ಗುಣಮಟ್ಟ ಹಾಗೂ ಪ್ರಮಾಣವನ್ನು ನಿರ್ಧರಿಸಿಕೊಂಡು ಸೇವನೆ ಮಾಡುವುದು ಹೆಚ್ಚು ಸೂಕ್ತ.

ತುಪ್ಪ ಸೇವನೆಯಿಂದಾಗುವ ಆರೋಗ್ಯದ ಪ್ರಯೋಜನಗಳು:

     ತುಪ್ಪದಲ್ಲಿ ಆರೋಗ್ಯಕರ ಕೊಬ್ಬಿನಾಂಶ ಇದೆ. ಇದು ಹೃದಯದ ಆರೋಗ್ಯಕ್ಕೆ ಹೆಚ್ಚು ಉಪಯುಕ್ತ, ಜೊತೆಗೆ ಕೆಟ್ಟ ಕೊಲೆಸ್ಟ್ರಾಲ್‌ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ ಕೀಲುಗಳ ಆರೋಗ್ಯ ಕಾಪಾಡಲು ಉತ್ತಮ ಮನೆಮದ್ದಾಗಿದೆ. ತುಪ್ಪದ ನಿಯಮಿತ ಸೇವನೆಯಿಂದ ಕೀಲುಗಳ ಬಿಗಿತ, ಕೀಲು ನೋವು ಸಹ ನಿವಾರಣೆಯಾಗುತ್ತದೆ. ತುಪ್ಪವು ಒಮೆಗಾ-3 ಮತ್ತು ಒಮೆಗಾ-6 ಕೊಬ್ಬಿನಾಮ್ಲ ಒಳಗೊಂಡಿದ್ದು, ಇದು ನಮ್ಮ ಜೀವಕೋಶಗಳನ್ನು ಕಾಪಾಡಿಕೊಳ್ಳಲು ನೆರವು ನೀಡಲಿದೆ. ಇನ್ನು, ತುಪ್ಪವು ಬ್ಯೂಟರಿಕ್‌ಆಮ್ಲವನ್ನು ಹೊಂದಿದ್ದು ಕರುಳಿನ ಪ್ರತಿರಕ್ಷಣಾ ಕೋಶಗಳನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ, ಜೊತೆಗೆ ನಮ್ಮಲಿರುವ ರೋಗನಿರೋಧಕ ಶಕ್ತಿಯನ್ನೂ ಸಹ ಬಲಗೊಳಿಸುತ್ತದೆ.

     ಆಯುರ್ವೇದದ ಪ್ರಕಾರ ತುಪ್ಪವು ಜೀರ್ಣಕಾರಿ ಕಿಣ್ವಗಳ ಸ್ರವಿಕೆಯನ್ನು ಉತ್ತೇಜಿಸುವ ಮೂಲಕ ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದನ್ನು ಹೆಚ್ಚಾಗಿ ಗಿಡಮೂಲಿಕೆಗಳ ಔಷಧಿಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಇದು ದೇಹದ ಪ್ರಮುಖ ಸಾರವನ್ನು ವೃದ್ಧಿಸಿ ರೋಗಗಳ ವಿರುದ್ಧ ಹೋರಾಡಲು ಸಹಾಯಕಾರಿಯಾಗಿದೆ. ತುಪ್ಪವು ಅಗತ್ಯ ಎ,ಡಿ,ಇ ಮತ್ತು ಕೆ ವಿಟಮಿನ್‌ಗಳನ್ನು ಹೊಂದಿದೆ. ಹಾಗೆಯೇ ಖನಿಜಾಂಶಗಳು, ಕ್ಯಾಲ್ಸಿಯಂ, ಫಾಸ್ಪರಸ್‌ ಅನ್ನು ಸಹ ಒಳಗೊಂಡಿದೆ.

ತ್ವಚೆಯ ಆರೈಕೆಗೂ ತುಪ್ಪ:

     ಕೇವಲ ಆರೋಗ್ಯವಷ್ಟೇ ಅಲ್ಲ, ನಮ್ಮ ತ್ವಚೆ ಕಾಪಾಡುವಲ್ಲಿಯೂ ತುಪ್ಪ ಪ್ರಮುಖ ಪಾತ್ರ ವಹಿಸಿದೆ. ತುಪ್ಪದಲ್ಲಿ ಸಾಕಷ್ಟು ಮಾಯಿಶ್ಚರೈಸಿಂಗ್‌ ಗುಣವಿದ್ದು, ಇದರ ಸೇವನೆಯಿಂದ ಚರ್ಮದಲ್ಲಿ ಮಾಯಿಶ್ಚರೈಸಿಂಗ್‌ ಉಳಿದುಕೊಳ್ಳಲಿದೆ, ಚರ್ಮ ಒಣಗುವುದು, ಬಿರುಕು ಬಿಡುವುದು ಇದೆಲ್ಲವೂ ಆಗುವುದಿಲ್ಲ. ಇನ್ನೂ ಕೂದಲಿನ ಆರೈಕೆಯಲ್ಲೂ ಸಹ ಪ್ರಯೋಜನವನ್ನು ಒಳಗೊಂಡಿದೆ.

ಸೇವನೆಯಲ್ಲಿ ಮಿತಿಯಿರಲಿ:

     ತುಪ್ಪ ಆರೋಗ್ಯಕ್ಕೆ ಒಳ್ಳೆಯದೇ ಆದರೆ, ನಿಯಮಿತ ಸೇವನೆಯಿಂದ ಮಾತ್ರ. ಹೆಚ್ಚು ಸೇವಿಸಿದರೆ ಅಮೃತವೂ ವಿಷವೆಂಬಂತೆ, ತುಪ್ಪವನ್ನೂ ಸಹ ಅಗತ್ಯಕ್ಕಿಂತ ಹೆಚ್ಚಾಗಿ ಸೇವನೆ ಮಾಡಿದರೆ ಅದರಿಂದ ಆರೋಗ್ಯದ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಊಟದ ಸಮಯದಲ್ಲಿ ಊಟದ ಪ್ರಮಾಣಕ್ಕೆ ಅನುಗುಣವಾಗಿ ತುಪ್ಪವನ್ನು ಬಳಸಬೇಕು. ಜೊತೆಗೆ, ಖಾಲಿ ಹೊಟ್ಟಯಲ್ಲಿ ತುಪ್ಪ ಸೇವನೆ ಒಳ್ಳೆಯದು. ದಿನಕ್ಕೆ 1-2 ಚಮಚದಷ್ಟು ತುಪ್ಪ ಸೇವನೆ ಆರೋಗ್ಯದ ದೃಷ್ಠಿಯಿಂದ ಒಳ್ಳೆಯದು, ಇದನ್ನು ಮೀರಿದರೆ, ಕೊಲೆಸ್ಟ್ರಾಲ್‌ ಆಗಿ ಪರಿವರ್ತನೆಗೊಳ್ಳಬಹುದು.

ತಪ್ಪದ ಆಯ್ಕೆ ಬಗ್ಗೆ ಗಮನವಿರಲಿ:

     ಇಂದು ಮಾರುಕಟ್ಟೆಯಲ್ಲಿ ಸಾಕಷ್ಟು ಬಗೆಯ ಹಾಗೂ ಬ್ರಾಂಡ್‌ನ ತುಪ್ಪಗಳು ಲಭ್ಯವಿದೆ. ಆದರೆ, ಎಲ್ಲವೂ ತಾಜಾ ಹಾಗೂ ಶುದ್ಧ ತುಪ್ಪವಾಗಿರಿವುದಿಲ್ಲ. ಮನೆಯಲ್ಲಿ ಮಾಡಿದ ತುಪ್ಪವೇ ಹೆಚ್ಚು ಶ್ರೇಷ್ಟ ಮತ್ತು ಆರೋಗ್ಯಕರ.

ಹೇಮ ಎನ್‌.ಜೆ

ಆಲ್ಮಾ ಮೀಡಿಯಾ ಸ್ಕೂಲ್‌ ವಿದ್ಯಾರ್ಥಿನಿ

Show More

Leave a Reply

Your email address will not be published. Required fields are marked *

Related Articles

Back to top button