ಬೆಳ್ಳಿ ಪರದೆಯೂ ಮಸುಕಾಗುವ ದಿನ ಬಂತೆ…!
ಒಂದು ಕಾಲದಲ್ಲಿ ಮನರಂಜನೆಯ ಅಕ್ಷಯಪಾತ್ರೆಯಾಗಿದ್ದ ಸಿನಿಮಾ ಇಂಡಸ್ಟ್ರೀ, ಇವತ್ತು ಮುಳುಗುತ್ತಾ ಇರುವ ಹಡಗು ಅಂದ್ರೆ ತಪ್ಪಾಗುವುದಿಲ್ಲ. ತುಂಬಾ ಜನಕ್ಕೆ ಸಿನಿಮಾ ಅಂದ್ರೆ ಆಸಕ್ತಿನೇ ಹೋಗಿಬಿಟ್ಟಿದೆ. ಬರಿ ಕನ್ನಡ ಸಿನಿಮಾ ಅಂತ ಅಲ್ಲಾ ಯಾವುದೇ ಭಾಷೆಯ ಸಿನಿಮಾಗಳನ್ನು ನೋಡದೇ ಇರುವಷ್ಟರ ಮಟ್ಟಿಗೆ ಜನರು ಬದಲಾಗ್ತಾ ಇದ್ದಾರೆ.
ನಿಜ ಹೇಳಬೇಕು ಅಂದ್ರೆ ನಾವು ಕೊನೆಯದಾಗಿ ಥಿಯೇಟರ್‌ನಲ್ಲಿ ಯಾವಾಗ ಸಿನಿಮಾ ನೋಡಿದ್ದು ಅಂತ ನೆನಪು ಮಾಡಿಕೊಂಡರೆ ಎಷ್ಟೋ ವರ್ಷಗಳಾಗಿವೆ ಅಂತ ಗೊತ್ತಾಗುತ್ತೆ. ಹಾಗಿದ್ರೆ ಇದಕ್ಕೆ ಕಾರಣ ಏನು, ಯಾವ ಕಾರಣಕ್ಕೆ ಸಿನಿಮಾ ಇಂಡಸ್ಟ್ರೀ ಹಿಂದೆ ಉಳಿತಾ ಇದೆ, ಭವಿಷ್ಯದಲ್ಲಿ ಸಿನಿಮಾ ಇಂಡಸ್ಟ್ರೀಗಳ ಸ್ಥಿತಿ ಹೇಗಿರುತ್ತೆ ಅಂತ ಸ್ವಲ್ಪ ಯೋಚನೆ ಮಾಡಬೇಕಿದೆ.
ಈಗಿನ ಸ್ಥಿತಿಯಲ್ಲಿ ಪ್ರೇಕ್ಷಕರನ್ನು ಥಿಯೇಟರ್‌ಗೆ ಕರೆಸೋಕೆ ಮಾಡ್ತಾ ಇರೋ ಪ್ರಯತ್ನ ಒಂದೆರಡಲ್ಲ. 90% ಸಿನಿಮಾಗಳಲ್ಲಿ ಮೊದಲ ಶೋ ನೋಡೋಕೆ ಕೂಡ ಜನ ಇರುವುದಿಲ್ಲ, ಕೆಲವೊಂದು ಥಿಯೇಟರ್‌ಗಳಲ್ಲಂತೂ ಉಚಿತ ಟಿಕೆಟ್‌ಕೊಟ್ಟು ಜನರನ್ನ ಕರೆಸಿ, ಥಿಯೇರ್‌ಹೊರಗೆ ಹೌಸ್ ಫುಲ್‌ಅಂತ ಬೋರ್ಡ್‌ಹಾಕೋ ಪರಿಸ್ಥಿತಿ ಬಂದಿದೆ. ನಂತರ ಜನ ಸಿನಿಮಾ ಚೆನ್ನಾಗಿದೆ ಅಂತ ರಿವೀವ್‌ಕೊಡ್ತಾರೆ.
ಅಷ್ಟಕ್ಕೂ ಸಿನಿಮಾಗಳ ಪ್ರೇಕ್ಷಕರು ಯಾಕೆ ಕಡಿಮೆ ಆಗ್ತಿದ್ದಾರೆ ಅಂದ್ರೆ ಇದಕ್ಕೆ ಮೊದಲ ಕಾರಣ ವಿಷಯದ ಕೊರತೆ, ತುಂಬಾ ಜನ ಸಿನಿಮಾ ನಿರ್ದೇಶಕರು ನಾಯಕನ ಪಾತ್ರದ ಕಡೆಗೆ ಗಮನ ಕೊಡುತ್ತಾರೆ, ಆಕ್ಷನ್‌ಮೂವಿಗಳನ್ನ ಮಾಡಿದ್ರೆ ಸಿನಿಮಾಗಳು ಹಿಟ್ ಆಗುತ್ತವೆ ಅಂತ ಅಂದುಕೊಂಡಿದ್ದಾರೆ. ಆದ್ರೆ ಸಿನಿಮಾ ಕಥೆಯ ಬಗ್ಗೆ ಜಾಸ್ತಿ ತಲೆ ಕೆಡಿಸಿಕೊಳ್ಳೋದಿಲ್ಲ. ಎಲ್ಲಾ ಸಿನಿಮಾ ನಿರ್ದೇಶಕರು ಒಂದೇ ರೀತಿಯ ಸೂತ್ರಗಳನ್ನ ಅಳವಡಿಸಿಕೊಳ್ಳುತ್ತಿದ್ದಾರೆ. ಸಿನಿಮಾಗಳಲ್ಲಿ ಏನಾದ್ರು ಹೊಸತನ ಇದ್ರೆ ಪ್ರೇಕ್ಷಕರನ್ನು ಆಕರ್ಷಿಸಬಹುದು.
ಮೊದಲನೆಯದಾಗಿ ಸಿನಿಮಾ ಬರಹಗಾರರನ್ನು ಇಂಡಸ್ಟ್ರೀಗಳಲ್ಲಿ ಸದುಪಯೋಗಪಡಿಸಿಕೊಳ್ಳುತ್ತಿಲ್ಲ, ಇಂಡಸ್ಟ್ರೀಗಳು ಕಥೆಗಳನ್ನ ನಂಬಿಕೊಂಡು ಸಿನಿಮಾ ಮಾಡುತ್ತಾ ಇಲ್ಲ, ನಾಯಕನ ಮೌಲ್ಯ ನೋಡಿಕೊಂಡು ಸಿನಿಮಾ ಮಡುತ್ತಾ ಇದ್ದಾರೆ. ಇದರ ಜೊತೆಗೆ ಒಳ್ಳೆಯ ಕಥೆ ಇರುವ ಸಿನಿಮಾಗಳೂ ಕೂಡ ಹಿಟ್ ಆಗ್ತಾ ಇಲ್ಲ. ಏಕೆಂದರೆ ಈ ಸಿನಿಮಾಗಳಲ್ಲಿ ಖ್ಯಾತ ನಾಯಕ, ನಾಯಕಿಯರು ಇರುವುದಿಲ್ಲ, ಇಂತಹ ಸಿನಿಮಾಗಳು ಥಿಯೇಟರ್ಗಳಿಗೆ ಬಂದದ್ದು ಗೊತ್ತಾಗುವುದಿಲ್ಲ ಹೋಗೋದು ಗೊತ್ತಾಗುವುದಿಲ್ಲ.
ಹಾಗೆ ಕೆಲವು ಸಿನಿಮಾಗಳು ಕಡಿಮೆ ಬಜೆಟ್‌ನ ಚಿತ್ರಗಳಾಗಿರುತ್ತವೆ ಅವುಗಳನ್ನು ಪ್ರಚಾರ ಮಾಡೋಕು ಹಣ ಇರುವುದಿಲ್ಲ ಆದ್ದರಿಂದ ಇಂತಹ ಸಿನಿಮಾಗಳು ಜನರನ್ನು ತಲುಪುವುದಿಲ್ಲ. ಸಿನಿಮಾ ಇಂಡಸ್ಟ್ರೀಗಳು ನಾಯಕ, ನಾಯಕಿಯರ ಮೇಲೆ ಹೂಡಿಕೆ ಮಾಡುವ ಬದಲು ಒಳ್ಳೆಯ ಕಥೆಗಳ ಮೇಲೆ ಹೂಡಿಕೆ ಮಾಡಿದರೆ ಈ ಪರಿಸ್ಥಿತಿ ಬದಲಾಗಬಹುದು. ಪ್ರತಿ ವರ್ಷ ಕನ್ನಡ ಇಂಡಸ್ಟ್ರಿಯಲ್ಲಿಯೇ 250 ಸಿನಿಮಾಗಳು ಬಿಡುಗಡೆ ಆಗುತ್ತವೆ ಅದರಲ್ಲಿ ಯಶಸ್ಸು ಕಾಣ್ತಾಯಿರೋದು ಕೇವಲ 3 ರಿಂದ 5 ಸಿನಿಮಾಗಳು ಮಾತ್ರ. ಈಗಿನ ಪೀಳಿಗೆಯ ಜನರಿಗೆ ತಾಳ್ಮೆ ತೀರಾ ಕಡಿಮೆ, 3 ಗಂಟೆಗಳ ಕಾಲ ಸಿನಿಮಾ ಥಿಯೇಟರ್ಗಳಲ್ಲಿ ಕುಳಿತುಕೊಂಡು ಸಿನಿಮಾ ನೋಡೋದು ಅಂದರೆ ತೀರಾ ದೂರದ ಮಾತು. ಕೇವಲ 10 ನಿಮಿಷಗಳ ಯಟ್ಯೂಬ್‌ವಿಡಿಯೋಗಳನ್ನೇ ಪೂರ್ತಿಯಾಗಿ ನೋಡದ ಜನರು ರೀಲ್ಸ್‌ಗಳನ್ನು ಸ್ಕಿಪ್‌ಮಾಡಿ ನೋಡುವಷ್ಟರ ಮಟ್ಟಿಗೆ ಬ್ಯುಸಿಯಾಗಿಬಿಟ್ಟಿದ್ದಾರೆ.
ಯಾವುದು ಬೆಸ್ಟ್‌ಮೂವಿ ಅಂತ ನಿರ್ಧರಿಸೋಕೆ ಜನರಿಗೆ ಗೊಂದಲವಾಗುತ್ತಾ ಇದೆ. ಸಿನಿಮಾ ವಿಮರ್ಶೆ ನೋಡಿ ಹೋಗೋಕೆ ಕೆಲವೊಮ್ಮೆ ಆ ವಿಮರ್ಶೆ ಕೂಡ ಹಣ ಕೊಟ್ಟು ಮಾಡಿಸಿದ ವಿಮರ್ಶೆಗಳಾಗಿರುತ್ತವೆ. ಇದೇ ರೀತಿ ಆದ್ರೆ ಸಿನಿಮಾ ಇಂಡಸ್ಟ್ರೀಗೆ ಬರುವ ಹೊಸಬರ ಕಥೆ ಮುಗೀತು ಅಂತಾನೇ ಅರ್ಥ. ಈ ಪರಿಸ್ಥಿತಿಗೆ ಅತೀ ಅಗ್ಗದ ಇಂಟರ್‌ನೆಟ್‌ಕೂಡ ಒಂದು ಕಾರಣ. ಅತೀ ಅಗ್ಗವಾಗಿ ಇಂಟರ್‌ನೆಟ್ ದೊರಕುತ್ತಿರುವುದರಿಂದ ಜನರಿಗೆ ಸುಲಭವಾಗಿ ಮನರಂಜನೆ ಸಿಗ್ತಾಯಿದೆ. ಜನರಿಗೇನು ಯಾವುದೋ ಒಂದು ರೀತಿಯಲ್ಲಿ ಮನರಂಜನೆ ಸಿಕ್ಕರೆ ಸಾಕು. ಅದರಲ್ಲೂ ಈಗ ಸಿನಿಮಾಗಳು ತೆರೆಕಂಡ ಒಂದೇ ತಿಂಗಳಲ್ಲಿ ಓಟಿಟಿಯಲ್ಲಿ ಬರುತ್ತಿವೆ, ಹಾಗೇ ಥಿಯೇಟರ್‌ಗಳು ಈಗ ತುಂಬಾ ದುಬಾರಿಯಾಗಿವೆ ಆದ್ದರಿಂದ ಜನರು ಥಿಯೇಟರ್‌ಗಳಿಗೆ ಹೋಗುವುದನ್ನು ಕಡಿಮೆ ಮಾಡಿದ್ದಾರೆ.
ಇನ್ನೊಂದು ಕಡೆ ಪೈರಸಿ ಕಾಟ, ಯಾವುದೇ ಹೊಸ ಸಿನಿಮಾ ತೆರೆಕಂಡರೂ ಆದು ಮರುದಿನವೇ ಮೊಬೈಲ್ಗಳಲ್ಲಿ ನೋಡೋಕೆ ಲಭ್ಯವಿರುತ್ತವೆ. ಜನರಿಗೆ ಬೇಕಾಗಿರೋದು ಉಚಿತವಾಗಿ ಸಿಕ್ಕರೆ ಹಣ ಕೊಟ್ಟು ಥಿಯೇಟರ್ಗಳಿಗೆ ಯಾಕೆ ಹೋಗುತ್ತಾರೆ. ಪೈರಸಿ ನಿಲ್ಲಿಸೋಕೆ ಆಗಲ್ವಾ…? ಆಗುತ್ತೆ ಆದರೆ ಅದರ ವಿರುಧ್ಧ ಸಿನಿಮಾ ಇಂಡಸ್ಟ್ರೀಗಳು ಒಗ್ಗಟ್ಟಾಗಿ ಧ್ವನಿ ಎತ್ತಬೇಕಾಗಿದೆ. ಆದ್ದರಿಂದ ಥಿಯೇಟರ್‌ಪ್ರಿಂಟ್‌ಗಳನ್ನು ನಿಲ್ಲಿಸೋದು ಸಧ್ಯದ ಪರಿಸ್ಥಿತಿಯಲ್ಲಿ ಕಷ್ಟ.
ಸಿನಿಮಾ ನಿರ್ಮಾಪಕರು ಆಕ್ಷನ್‌ಸಿನಿಮಾಗಳ ಮಾದರಿಯನ್ನ ಅನುಸರಿಸಿ ಸಿನಿಮಾ ಮಾಡಿದರೆ ಮಾತ್ರ ಡಬ್ಬಿಂಗ್, ಓಟಿಟಿ ರೈಟ್ಸ್ ಸಿಗುತ್ತದೆ ಎಂದುಕೊಂಡಿದ್ದಾರೆ, ಆದರೆ ನಿಜಸ್ಥಿತಿ ಬೇರೆಯೇ ಇದೆ. ಸಿನಿಮಾದ ವಿಷಯ ಚೆನ್ನಾಗಿದ್ದರೆ ಎಲ್ಲಾ ರೈಟ್ಸ್‌ಕೂಡ ಸಿಗುತ್ತದೆ. ಆದರೆ ಹೊಸ ಸಿನಿಮಾ ಮಾಡುವವರಿಗೆ ಇದನ್ನು ಮನವರಿಕೆ ಮಾಡಿಕೊಳ್ಳೋಕೆ ಆಗುತ್ತಾ ಇಲ್ಲ. ಉದಾಹರಣೆಗೆ ಒಂದು ಮೊಟ್ಟೆಯ ಕಥೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಈ ಸಿನಿಮಾಗಳಲ್ಲಿ ಯಾವುದೇ ಪೈಟ್‌ಸೀನ್‌ಗಳು ಇರಲಿಲ್ಲ ಮತ್ತು ಇಳ್ಳೆಯ ಸಿನಿಮಾ ಮಾದರಿ ಕೂಡ ಇತ್ತು ಆದರೂ ಈ ಸಿನಿಮಾಗಳು ಯಶಸ್ಸು ಕಂಡವು. ಕೆಲವು ಸಿನಿಮಾ ನಿರ್ಮಾಪಕರು ಮಾತ್ರ ಇನ್ನೂ ಹಳೆಯ ಮಾದರಿಯಲ್ಲೇ ಸಿನಿಮಾ ಮಾಡ್ತಾ ಇರುವುದರಿಂದ ಒಳ್ಳೆಯ ಸಿನಿಮಾ ಕಥೆಗಳು ಮೂಲೆಗೆ ಬೀಳ್ತಾ ಇವೆ.
ಜನರಿಗೆ ಬೇಕಾಗಿರುವುದು ಅವರ ಜೀವನಕ್ಕೆ ಹತ್ತಿರವಾಗುವಂತಹ ಸಿನಿಮಾಗಳು, ಜನರು ಯಾವುದೇ ಸಿನಿಮಾವನ್ನು ನೋಡಿದರೂ ಅದರ ಯಾವುದೋ ಒಂದು ವಿಷಯವನ್ನು ಅವರ ನಿಜ ಜೀವನಕ್ಕೆ ಹೋಲಿಕೆ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಆದ್ದರಿಂದ ಸಿನಿಮಾ ನಿರ್ಮಾಪಕರು ಜನರ ಹತ್ತಿರಕ್ಕೆ ತಲುಪುವ ಒಳ್ಳೆಯ ಕಥೆಗಳ ಕಡೆಗೆ ಗಮನಹರಿಸಬೇಕಾಗಿದೆ. ಇದರಿಂದ ಸಿನಿಮಾ ಇಂಡಸ್ಟ್ರೀಗಳು ಬೆಳವಣಿಗೆಯನ್ನು ಕಾಣಬಹುದಾಗಿದೆ.
ಹೇಮ ನಿರ್ಭಯ
ಆಲ್ಮಾ ಮೀಡಿಯಾ ಸ್ಕೂಲ್ ವಿಧ್ಯಾರ್ಥಿನಿ