Alma Corner

ಕರುನಾಡಿನ ʼಭಾಗ್ಯʼರಾಮಯ್ಯ-ಸಿದ್ದರಾಮಯ್ಯ..!

ಸಿದ್ದರಾಮಯ್ಯ 1948ರ ಆಗಸ್ಟ್ 3ರಂದು, ಮೈಸೂರು ಜಿಲ್ಲೆಯ ವರುಣಾ ಹೋಬಳಿಯ ಸಿದ್ದರಾಮನ ಹುಂಡಿಯಲ್ಲಿ, ಸಿದ್ದರಾಮೇಗೌಡ ಮತ್ತು ಬೋರಮ್ಮ ದಂಪತಿಗೆ ಜನಿಸಿದರು. ಅವರ ಕುಟುಂಬ ಕೃಷಿಯ ಮೇಲೆ ಅವಲಂಬಿತವಾಗಿತ್ತು. ತುಂಬು ಕುಟುಂಬದಲ್ಲಿ ಸಿದ್ದರಾಮಯ್ಯರ ಜನನವಾಗಿತ್ತು.
ಶಿಕ್ಷಣ:
ಕುಟುಂಬದ ಕಷ್ಟದ ಪರಿಸ್ಥಿತಿಗಳ ಕಾರಣ ಅವರ ಶಿಕ್ಷಣದ ಹಾದಿ ಕಷ್ಟಭರಿತವಾಗಿತ್ತು. ಹೀಗಾಗಿ ಸಿದ್ದರಾಮಯ್ಯ ಬಾಲ್ಯದ ಬಹತೇಕ ಭಾಗ ಕುರಿ ಕಾವುವುದರಲ್ಲೇ ಕಳೆಯಿತು. ಅಂದು ಅವರಿಗೆ ನೆರವಾಗಿದ್ದು ಅವರ ಗ್ರಾಮ ಶಾಲೆಯ ಶಿಕ್ಷಕರು. ಅವರಿಗೆ ಓದಿನ ಬಗ್ಗೆ ಇರುವ ಆಸಕ್ತಿಯನ್ನು ಗುರುತಿಸಿ ಅವರನ್ನು ನೇರವಾಗಿ 4ನೇ ತರಗತಿಗೆ ಸೇರಿಸಿಕೊಂಡರು. ನಂತರ ಅವರು ತಮ್ಮ ಫ್ರೌಡ ಶಿಕ್ಷಣವನ್ನು ವಿದ್ಯಾವರ್ದಕ ಫ್ರೌಡ ಶಾಲೆಯಿಂದ ಪಡೆದರು. ವಿದ್ಯಾರ್ಥಿ ಅಗಿದ್ದಾಗ ಮೈಸೂರಿನಲ್ಲಿ ಬಾಡಿಗೆಗೆ ಓಂದು ರೂಂ ತೆಗೆದುಕೊಂಡು ವಾಸ ಮಾಡುತ್ತಿದ್ದರು. ಅವರು ತಮ್ಮ ಬಿ.ಎಸ್ಸ್ಸಿ ಮತ್ತು ಎಲ್.ಎಲ್.ಬಿ. ಪದವಿಯನ್ನು ಮೈಸೂರು ವಿಶ್ವವಿದ್ಯಾಲಯದಿಂದ ಪಡೆದರು. ಪದವಿ ನಂತರ PM ಚಿಕ್ಕಬೋರಯ್ಯಗೆ ಅವರ ಹತ್ತಿರ ಜೂನಿಯರ್ ಆಗಿ ಕೆಲಸ ಮಾಡುತ್ತಿದ್ದು, ನಂತರ ವಿದ್ಯಾವರ್ದಕ ಕಾನೂನು ಕಾಲೇಜಿನಲ್ಲಿ ಕೆಲ ಸಮಯಕ್ಕೆ ಕಾನೂನು ವಿಷಯನವನ್ನು ಬೋಧಿಸುತ್ತಿದ್ದರು.

ವೈಯಕ್ತಿಕ ಜೀವನ:
ಸಿದ್ದರಾಮಯ್ಯ ಅವರು ಪಾರ್ವತಿಯನ್ನು ವಿವಾಹವಾಗಿದ್ದಾರೆ. ಇವರಿಗೆ ಇಬ್ಬರು ಗಂಡು ಮಕ್ಕಳು (ರಾಕೇಶ್ ಮತ್ತು ಯತೀಂದ್ರ). ಹಿರಿಯ ಮಗ ರಾಕೇಶ್, 2016 ರಲ್ಲಿ 38ನೇ ವಯಸ್ಸಿನಲ್ಲಿ ಬಹು ಅಂಗಾಂಗ ವೈಫಲ್ಯದಿಂದ ನಿಧನರಾದರು. ಅವರ ಕಿರಿಯ ಮಗ ಯತೀಂದ್ರ ಪ್ರಸ್ತುತ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿದ್ದಾರೆ.

ವೃತ್ತಿ ಜೀವನ:
ವಕೀಲಿ ವೃತ್ತಿ ಆರಂಭಿಸಿದ ನಂತರವೂ ಸಿದ್ದರಾಮಯ್ಯ ನ್ಯಾಯಲಯಗಳಲ್ಲಿ ಪೂರ್ಣಪ್ರಮಾಣದಿಂದ ಕೆಲಸ ಮಾಡಲಿಲ್ಲ. ಯಾವಾಗಲೂ ಬಡವರ, ಶೋಷಿತರ ಕಷ್ಟಗಳ ಬಗ್ಗೆ ಚಿಂತಿಸುವ ವ್ಯಕ್ತಿ ಆಗಿದ್ದರೆಂದು ಹೇಳುತ್ತಾರೆ ಅವರ ಒಡನಾಡಿಗಳು. ಸಿದ್ದರಾಮಯ್ಯನವರು ತಮ್ಮ ವಿದ್ಯಾರ್ಥಿ ದಿನಗಳಲ್ಲಿ ತಮ್ಮ ವಾಕ್ಚಾತುರ್ಯಕ್ಕೆ ಹೆಸರಾಗಿದ್ದರು. ಡಾ.ರಾಮ್‌ ಮನೋಹರ್‌ ಲೋಹಿಯ ಪ್ರತಿಪಾದಿಸಿದ ಸಮಾಜವಾದಿ ಸಿದ್ದಾಂಥ ಅವರ ಮೇಲೆ ಎಲ್ಲಿಲ್ಲದ ಪ್ರಭಾವ ಬೀರಿತು. ಅವರ ವಿದ್ಯಾರ್ಥಿ ಬದುಕು ಹೋರಾಟದ ಬದುಕಾಗಿತ್ತು. ಅಂದಿನ ಆ ಹೋರಾಟದ ಬದುಕೇ ಮುಂದೆ ಅವರಿಗೆ ಸ್ಫೂರ್ತಿಯಾಗಿ, ಬಡವರಿಗಾಗಿ ಹಲವಾರು ಜನಪರ ಯೋಜನೆಗಳನ್ನು (ಅನ್ನಭಾಗ್ಯ, ಕ್ಷೀರಭಾಗ್ಯ, ವಿದ್ಯಾಸಿರಿ, ಕೃಷಿಭಾಗ್ಯ ಇತ್ಯಾದಿ) ಜಾರಿಗೆ ತರಲು ಕಾರಣವಾಯಿತು.


ರಾಜಕೀಯ ವೃತ್ತಿ ಜೇವನ:
ಸಮಾಜದ ದುರ್ಬಲ ವರ್ಗಗಳಿಗೆ ಸಾಮಾಜಿಕ ನ್ಯಾಯವನ್ನು ಕೊಡಿಸುವದಕ್ಕೆ ಸಿದ್ದರಾಮಯ್ಯ ಅವರು ತಮ್ಮ ಕಾನೂನು ವೃತ್ತಿಗೇ ವಿದಾಯ ಹೇಳಿ, ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟರು. ಮೈಸೂರಿನ ವಕೀಲ, ರೈತ ಹೋರಾಟಗಾರ ಪ್ರೊ ನಂಜುಂಡಸ್ವಾಮಿಯವರು ಸಿದ್ದರಾಮಯ್ಯ ಅವರನ್ನು ರಾಜಕೀಯಕ್ಕೆ ಕರೆತಂದರು. 1978ರಲ್ಲಿ ರಾಜಕಾರಣದಲ್ಲಿ ಆಧಿಕೃತವಾಗಿ ಪ್ರವೇಶಿಸಿದ ಸಿದ್ದರಾಮಯ್ಯ ತಾಲೂಕು ಮಂಡಳಿಯ ಸದಸ್ಯರಾಗಿದ್ದರು. 1980ರಲ್ಲಿ ಅವರು ಮೊದಲಬಾರಿಗೆ ಮೈಸೂರು ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನ್ನು ಅನುಭವಿಸಿದರು. ಈ ಸೋಲಿನಿಂದ ಧೃತಿಗೆಡದೇ, ಮತ್ತೆ 1983 ರ ವಿಧಾನಸಭೆ ಚುನಾವಣೆಯಲ್ಲಿ ಲೋಕದಳದ ಅಭ್ಯರ್ಥಿಯಾಗಿ ಚಾಮುಂಡೇಶ್ವರಿ ಕ್ಷೇತ್ರದಿಂದ, ತಕ್ಕಡಿ ಗುರುತಿನಡಿ ಸ್ಪರ್ಧಿಸಿದರು. ಆ ಚುನಾವಣೆಯಲ್ಲಿ ಅವರು ಅಂದಿನ ಜನಪ್ರಿಯ ನಾಯಕ ಘಟಾನುಘಟಿ ಡಿ.ದೇವರಾಜ ಅರಸು ಅವರನ್ನು ಸೋಲಿಸಿ ಪ್ರಥಮ ಬಾರಿ ವಿಧಾನಸಭೆಗೆ ಪ್ರವೇಶಿಸಿದರು. ಈ ಗೆಲುವಿನಲ್ಲಿ ಮೈಸೂರು ತಾಲೂಕಿನ ಮುಖಂಡರಾಗಿದ್ದ ಕೆಂಪವೀರಯ್ಯ ಅವರ ಪಾತ್ರ ಪ್ರಮುಖವಾಗಿತ್ತು.


ಸಿದ್ದರಾಮಯ್ಯ ಅವರು ವಿಧಾನಸಭೆಗೆ ಹೋದಾಗ, ರಾಮಕೃಷ್ಣ ಹೆಗಡೆ ನೇತೃತ್ವದ ಸರ್ಕಾರವಿತ್ತು. ಆಗ ರಾಮಕೃಷ್ಣ ಹೆಗಡೆ ಪಕ್ಷೇತರ ಮತ್ತು ಬಿಜೆಪಿ ಸದಸ್ಯರ ಬೆಂಬಲ ಕೋರಿದ್ದರು. ಇದೇ ಸಮಯದಲ್ಲಿ ಸಿದ್ದರಾಮಯ್ಯ ಕೂಡ ಹೆಗಡೆ ಅವರಿಗೆ ಬೆಂಬಲ ನೀಡಿದರು. ಇದು ಅವರಿಗೆ ಅವರು ಕನ್ನಡ ಕಾವಲು ಸಮತಿಯ ಮೊದಲ ಅಧ್ಯಕ್ಷ ಸ್ಥಾನವನ್ನು ತಂದು ಕೊಟ್ಟಿತ್ತು. ನಂತರ 1985ರಲ್ಲಿ ನಡೆದ ಮಧ್ಯಂತರ ಚುನಾವಣೆಯಲ್ಲಿ ಮತ್ತದೇ ಕ್ಷೇತ್ರದಿಂದ ಗೆದ್ದ ಸಿದ್ದರಾಮಯ್ಯ, ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ರೇಷ್ಮೆ, ಪಶು ಸಂಗೋಪನೆ ಸಚಿವರಾಗಿ ಕಾರ್ಯ ನಿರ್ವಹಿಸಿದರು. ಎಸ್. ಆರ್ ಬೊಮ್ಮಾಯಿ ಅವರ ಸಂಪುಟದಲ್ಲಿ ಸಾರಿಗೆ ಸಚಿವರಾದರು. 1989 ರಲ್ಲಿ ಸಿದ್ದರಾಮಯ್ಯ ಅವರು ಜನತಾದಳ ಅಭ್ಯರ್ಥಿಯಾಗಿ ವಿಧಾನಸಭೆ ಚುನಾವಣೆಯಲ್ಲಿ ಸೋಲನ್ನು ಕಂಡರು. 1991 ರಲ್ಲಿ ಜನತಾದಳ ಅಭ್ಯರ್ಥಿಯಾಗಿ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನ್ನು ಕಂಡರು. 1992ರಲ್ಲಿ ಸಿದ್ದರಾಮಯ್ಯ ಜನತಾದಳದ ಪ್ರಧಾನ ಕಾರ್ಯದರ್ಶಿಯಾದರು, ಇದೇ ಸಮಯಕ್ಕೆ HD ದೇವೇಗೌಡ ಕೂಡ JD ಸೇರ್ಪಡೆಯಾಗಿದ್ದರು. 1994ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಗೆದ್ದ ಸಿದ್ದರಾಮಯ್ಯ, HD ದೇವೇಗೌಡ ನೇತೃತ್ವದ ಸರ್ಕಾರದಲ್ಲಿ ಹಣಕಾಸು ಸಚಿವರಾದರು. ಆ ಕಾಲದಲ್ಲಿ ಅನೇಕರು ಕುರಿ ಕಾಯುವವನು ಬಜೆಟ್‌ ಮಂಡಿಸುತ್ತಾನೆಂದು ಲೇವಡಿ ಮಾಡಿದ್ದರು.
ಆದರೆ ಹಣಕಾಸು ಸಚಿವರಾಗಿ ಸಿದ್ದರಾಮಯ್ಯ ಅತ್ಯಂತ ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡು ಎಲ್ಲರನ್ನೂ ನಿಬ್ಬೆರಗಾಗಿಸಿದ್ದರು. ರಾಜ್ಯದಲ್ಲಿ ಆರ್ಥಿಕ ಸಂಕಷ್ಟವಿದ್ದರೂ ಲಾಟರಿ ನಿಷೇಧ ಮಾಡಿದರು. ದೊಡ್ಡ ಕುಳಗಳ ಕಪಿಮುಷ್ಠಿಯಲ್ಲಿದ್ದ ಅಬಕಾರಿ ಇಲಾಖೇಯನ್ನು ಬಿಡಿಸಿ, ರಾಜ್ಯದ ಆದಯ ಹೆಚ್ಚುವಂತೆ ಮಾಡಿದರು.


ಆದರೆ ನಂತರ ನಡೆದ ರಾಜಕೀಯ ಬೆಳವಣಿಗೆಗಳಿಂದ, ಸಿದ್ದರಾಮಯ್ಯ ಜಾತ್ಯಾತ್ಯೀತ ಜನತಾದಳ ಪಕ್ಷ ಸೇರಿದರು. 1999 ರಲ್ಲಿ SM ಕೃಷ್ಣ ನೇತೃತ್ವದ ಕಾಂಗ್ರೆಸ್‌ ಅಲೆಯಲ್ಲಿ ವಿಪಕ್ಷಗಳು ಕೊಚ್ಚಿ ಹೋದವು. ಸಿದ್ದರಾಮಯ್ಯ ಕೂಡ ಚುನಾವಣೆಯಲ್ಲಿ ಸೋತರು. ಮುಂದೆ 2004ರಲ್ಲಿ ಸಿದ್ದರಾಮಯ್ಯ JDS ರಾಜ್ಯಾಧ್ಯಕ್ಷ ಹುದ್ದೆ ಏರಿದರು. ಸಿದ್ದರಾಮಯ್ಯ ನೇತೃತ್ವದಲ್ಲಿ JDS ತನ್ನ ಇತಿಹಾಸದಲ್ಲೇ ಅತೀ ಹೆಚ್ಚು ಅಂದ್ರೆ 58 ಕ್ಷೇತ್ರಗಳನ್ನು ಗೆದ್ದು ಬೀಗಿತ್ತು. JDS ನ ಈ ಗೆಲುವಿಗೆ ಕಾರಣವಾಗಿದ್ದು ಉತ್ತರ ಕರ್ನಾಟಕದ ಕ್ಷೇತ್ರಗಳು. ಆ ಕ್ಷೇತ್ರಗಳನ್ನು JDS ಗೆದ್ದಿದ್ದೇ ಸಿದ್ದರಾಮಯ್ಯ ಹೆಸರಿನ ಕಾರಣ ಎಂದು ಹೇಳಬಹುದು. ಈ ಗೆಲುವಿನ ನಂತರ ಸಿದ್ದರಾಮಯ್ಯ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾದರು. ರಾಜಕೀಯ ಅಂದ ಮೇಲೆ ಏಳು-ಬೇಳು ಸಹಜ, ಅಹಿಂದ ಸಮಾವೇಶ ಮಾಡಿದರು ಎಂಬ ಕಾರಣಕ್ಕೆ 2005ರಲ್ಲಿ JDS ಸಿದ್ದರಾಮಯ್ಯರನ್ನು ಪಕ್ಷದಿಂದ ಉಚ್ಛಾಟಿಸಿತು. ನಂತರ ಸಿದ್ದರಾಮಯ್ಯ ಅವರು ಜೆ.ಡಿ.ಎಸ್ ಪಕ್ಷದಿಂದ ಹೊರಬಂದರು. ಹೀಗೆ ಸಿದ್ದರಾಮಯ್ಯ ನೇತೃತ್ವದಲ್ಲಿ ಬಂದ ಸರ್ಕಾರ ಮತ್ತು ಪಕ್ಷವೇ ಅವರನ್ನು ಕಡೆಗಾಣಿಸಿತ್ತು.

ಕಾಂಗ್ರೆಸ್ ಹವಾ:
ಈ ಕಷ್ಟಕರ ಪರಿಸ್ಥಿತಿಗಳಿಂದ ವಿಚಲಿತರಾಗದೇ, ಸಿದ್ದರಾಮಯ್ಯ ತಮ್ಮ ಮುಂದಿನ ರಾಜಕೀಯ ಹೆಜ್ಜೆಗಳನ್ನಿಟ್ಟರು. ಅಂದಿನಿಂದ ಇಂದಿನವರೆಗೆ ಸಿದ್ದರಾಮಯ್ಯ ತಿರುಗಿ ನೋಡಿದ್ದಿಲ್ಲ. JDS ನಿಂದ ಬಲವಂತವಾಗಿ ಹೊರಹಾಕಲ್ಪಟ್ಟ ಸಿದ್ದರಾಮಯ್ಯ, 2006 ರಲ್ಲಿ ಸೋನಿಯಾ ಗಾಂಧಿ ಅವರ ನೇತ್ರತ್ವದಲ್ಲಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಿದರು. ಅವರ ಪಕ್ಷ ಸೇರ್ಪಡೆಗೆ ಅಂದಿನ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಸ್ವತಃ ಬೆಂಗಳೂರಿಗೆ ಬಂದಿದ್ದು ವಿಶೇಷವಾಗಿತ್ತು. ಅಂದಿನ ಅನೇಕ ಜೆಡಿಎಸ್‌ ನಾಯಕರು ಸಿದ್ದರಾಮಯ್ಯರೊಂದಿಗೆ ಕಾಂಗ್ರೆಸ್‌ ಪ್ರವೇಶಿಸಿಯಾಗಿತ್ತು. ಹೀಗೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದ ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಮತ್ತು ಪಕ್ಷದಿಂದ ಹೊರಹಾಕಲ್ಪಟ್ಟ ಸಿದ್ದರಾಮಯ್ಯಗೆ ಕಾಂಗ್ರೆಸ್‌ ಬಲ ಪೂರಕವಾಗಿತ್ತು.
ಕಾಂಗ್ರೆಸ್ ಸೇರಿದ ನಂತರ ಸಿದ್ದರಾಮಯ್ಯ ರಾಜಕೀಯ ಜೀವನದಲ್ಲಿ ಇನ್ನೊಂದು ಹಂತ ಬೆಳೆದಂತಾಯಿತು. ಕಾಂಗ್ರೆಸ್‌ ಸೇರ್ಪಡೆ ನಂತರ ನಡೆದ ಚಾಮುಂಡೇಶ್ವರಿ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಸಿದ್ದರಾಮಯ್ಯ ತಮ್ಮ ವಿರೋಧಿಗಳ ಬಾಯಿ ಮುಚ್ಚಿಸಿದ್ದರು.
ಇದರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಭರ್ಜರಿ ಗೆಲವನ್ನು ಸಾಧಿಸಿದರು. 2008ರ ವಿಧಾನಸಭೆ ಕ್ಷೇತ್ರಗಳ ಮರುವಿಂಗಡನೆಯ ನಂತರ, ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರದಿಂದ ಸ್ಪರ್ಧಿಸಿ ವಿಧಾನಸಭೆಗೆ ಪ್ರವೇಶಿಸಿ, ಮೊದಲ ಬಾರಿಗೆ ವಿಧಾನಸಭೆಯಲ್ಲಿ ವಿರೋಧಪಕ್ಷ ನಾಯಕರಾದರು. ಈ ಸಮಯದಲ್ಲಿ ವಿಧಾನಸಭೆಯಲ್ಲಿ ಬಳ್ಳಾರಿಯ ಗಣಿಧಣಿಗಳ ಸವಾಲು ಸ್ವೀಕರಿಸಿ, ಬೆಂಗಳೂರಿನಿಂದ ಬಳ್ಳಾರಿಯವರೆಗೂ ಪಾದಯಾತ್ರೆ ನಡೆಸಿ ರಾಜ್ಯ ಕಾಂಗ್ರೆಸ್‌ಗೆ ಹೊಸ ಚೈತನ್ಯ ನೀಡಿದರು.


ಮುಖ್ಯಮಂತ್ರಿ ಆದಾಗ:
ಸಿದ್ದರಾಮಯ್ಯ ಅವರು ಮೊದಲನೇ ಬಾರಿಗೆ 2013ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಹಿಡಿದರು. ಇಡೀ ರಾಜ್ಯಸುತ್ತಿ ಕಾಂಗ್ರೆಸ್ ಪರ ಪ್ರಚಾರ ಮಾಡಿ ಪಕ್ಷದ ಭಾರೀ ಗೆಲುವಿಗೆ ಕಾರಣರಾದರು. 2013ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಸ್ವೀಕರಿಸಿದ ಸಿದ್ದರಾಮಯ್ಯ ಅವರ ಮುಂದೆ ಹಲವಾರು ಸವಾಲುಗಳಿದ್ದವು. ಆರ್ಥಿಕ ಶಿಸ್ತಿಗೆ ಬದ್ಧವಾಗಿದ್ದ ಕರ್ನಾಟಕದಲ್ಲಿ ವಿತ್ತೀಯ ಶಿಸ್ತು ಅಪಾಯದಿಂದ ಅಂಚಿನಲ್ಲಿತ್ತು. ರಾಜ್ಯದ ರಾಜಕೀಯ ಅಸ್ಥಿರತೆಯಿಂದ ಆರ್ಥಿಕ ಹಿನ್ನೆಡೆ ಅನುಭವಿಸಿತ್ತು. ಇಂತಹ ಕಷ್ಟದಲ್ಲಿ ಸಿದ್ದರಾಮಯ್ಯ ಅವರು ಈ ಸವಾಲುಗಳನ್ನು ದಿಟ್ಟತನದಿಂದಲೇ ಸ್ವೀಕರಿಸಿ 5 ವರ್ಷಗಳ ಕಾಲ ದಕ್ಷ ಆಡಳಿತ ನೀಡಿದರು. 2018ರಲ್ಲಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬರೋಬ್ಬರಿ 40 ವರ್ಷಗಳ ನಂತರ ಅಂದರೆ ದಿವಂಗತ ದೇವರಾಜ ಅರಸರ ನಂತರ 5 ವರ್ಷಗಳ ಅವಧಿ ಸಂಪೂರ್ಣವಾಗಿ ಮುಗಿಸಿದ ಆಡಳಿತ ನೀಡಿದ ಮುಖ್ಯಮಂತ್ರಿ ಎನ್ನುವ ಹೆಗ್ಗಳಿಕೆಗೆ ಸಿದ್ದರಾಮಯ್ಯ ಪಾತ್ರರಾದರು. ಅಲ್ಲದೇ ಹಣಕಾಸು ಸಚಿವರಾಗಿ 15 ಬಾರಿ ಬಜೆಟ್ ಮಂಡಿಸಿದ ದಾಖಲೆಯನ್ನು ಹೊಂದಿದ್ದಾರೆ.
2023ರ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷ ಭರ್ಜರಿ ಗೆಲವನ್ನು ಸಾಧಿಸಿ ಸಿದ್ದರಾಮಯ್ಯ ಅವರು 2ನೇ ಬಾರಿಗೆ ಮುಖ್ಯಮಂತ್ರಿಯಾದರು. ಮೊದಲ ಸಂಪುಟ ಸಭೆಯ ನಂತರ, ಅವರು ಎಲ್ಲಾ ʼ5 ಗ್ಯಾರಂಟಿಗಳನ್ನುʼ ಜಾರಿಗೆ ತರಲಾಗುವುದು ಎಂದು ಘೋಷಿಸಿದರು. ನುಡಿದಂತೆ ನಡೆದಿದ್ದೇವೆ ಎನ್ನುವ ಘೋಷವಾಕ್ಯದಡಿ ಈವರೆಗೂ ಕೊಟ್ಟ ಮಾತಿನಂತೆ ನಡೆದಿದ್ದಾರೆ.

ಮುಡಾ ಹಗರಣ:
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ವಿಚಾರದಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿದೆ. ಬೇಕಾಬಿಟ್ಟಿ ಹಂಚಿಕೆ ಮಾಡಿ, ಅಂದಾಜು 5 ಸಾವಿರ ಕೋಟಿಯಷ್ಟು ಭಾರೀ ಅಕ್ರಮ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಅಕ್ರಮ ಕುರಿತು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಮುಖ್ಯಮಂತ್ರಿ ವಿರುದ್ಧ ತನೆಖೆಯನ್ನು ಮುಂದುವರಿಸುವಂತೆ ಪ್ರಾಸಿಕ್ಯೂಷನ್ ನೋಟಿಸ್ ಅನ್ನು ಕೊಟ್ಟರು. ನಂತರ, ಈ ಮುಡಾ ಪ್ರಕರಣ ಜಾರಿ ನಿರ್ದೇಶನಲಯದಲ್ಲಿ ತನಿಖೆಯಾಗಿ ಈಗ ರಾಜ್ಯದಲ್ಲಿ ಭಾರೀ ಸುದ್ದಿ ಮಾಡುತ್ತಿದೆ. ಬೆಳಗಾವಿ ಅಧಿವೇಶನದಲ್ಲಿಯೂ ಮುಡಾ ಹಗರಣ, ಪ್ರತಿಪಕ್ಷದ ಸದಸ್ಯರಿಗೆ ಪ್ರಧಾನ ವಿಷಯವಾಗಿತ್ತು. ಈ ಹಗರಣವನ್ನು ಕುರಿತು, ಸಿದ್ದರಾಮಯ್ಯ ಅವರು ಅವರ ವಿರುದ್ಧ ಎಲ್ಲಾ ಆರೋಪಗಳನ್ನು ತಿರಸ್ಕರಿಸಿ ರಾಜ್ಯದ ಬೆಳವಣಿಗೆ ಬಗ್ಗೆ ಗಮನ ಕೊಟ್ಟು ಮುಂದೆ ಸಾಗುತ್ತಿದ್ದಾರೆ.
ಒಟ್ಟಿನಲ್ಲಿ ಕರ್ನಾಟಕದ ಮೇರು ಕೆಲವೇ ಕೆಲವು ರಾಜಕೀಯ ವ್ಯಕ್ತಿತ್ವಗಳಲ್ಲಿ ಒಬ್ಬರಾಗಿ ನಿಲ್ಲುವವರು ಸಿದ್ದರಾಮಯ್ಯ. ಕರ್ನಾಟಕದ ರಾಜಕರಣದಲ್ಲಿ ಅನೇಕ ಮಹತ್ವದ ಪಾತ್ರಗಳನ್ನು ಸಿದ್ದರಾಮಯ್ಯ ಸಮರ್ಥಕವಾಗಿ ನಿಭಾಯಿಸಿದ್ದಾರೆ. ಅಹಿಂದ ನೇತಾರ. ಅನೇಕ ಭಾಗ್ಯಗಳನ್ನು ಕೊಟ್ಟ ಸರದಾರ. ಸಾಮಾಜಿಕ ನ್ಯಾಯದ ಹರಿಕಾರ. ಹಿಂದುಳಿದ ವರ್ಗಗಳ ಕಲ್ಯಾಣದ ಶ್ರಮಿಕ. ಸಮಾಜವಾದಿ ಚಿಂತನೆಗಳ ಸಿದ್ದಾಂಥಬದ್ಧ ರಾಜಕಾರಣಿ. 4 ದಶಕಗಳ ಕಾಲ ಕಳಂಕರಹಿತ ಸಾರ್ವಜನಿಕ ಜೀವನ ನಡೆಸಿದ ನಾಯಕ. ದಿವಂಗತ ದೇವರಾಜ ಅರಸ ನಂತರ ಪೂರ್ಣಪ್ರಮಾಣದ ಅಧಿಕಾರ ನಡೆಸಿದ ಮುಖ್ಯಮಂತ್ರಿ. 16 ಬಜೆಟ್‌ಗಳನ್ನು ಕೊಟ್ಟ ಲೆಕ್ಕರಾಮಯ್ಯ. ಸದಾ ಕನ್ನಡ ಪರ ಗಟ್ಟಿಯಾಗಿ ನಿಲ್ಲುವ ಕನ್ನಡರಾಮಯ್ಯ. ಹೀಗೆ ಈ ಎಲ್ಲ ಗುಣಗಳು, ಜನಪರ ಕೆಲಸಗಳು ಮತ್ತು ನಡವಳಿಕೆಯಿಂದ ಜನರ ಮನ ಗೆದ್ದ ಸಿದ್ದರಾಮಯ್ಯ, ಮಾಸ್‌ ಲೀಡರ್‌ ಶಬ್ದಕ್ಕೆ ಅನ್ವರ್ಥಕರಾಗಿ ಸ್ಥಾಪಿತವಾಗಿದ್ದಾರೆ.

Poem on siddaramaiah :-
A beacon of hope for the poor and the weak,
With courage and justice, it’s change you seek.
Your steps tread firmly on truth’s noble trail,
Lifting the helpless, you never fail.
A leader of masses, a guardian so true ,
Mr. Siddu, the people’s light, we honor you .

ಧನ್ಯಾ ರೆಡ್ಡಿ

ಆಲ್ಮಾ ಮೀಡಿಯಾ ಸ್ಕೂಲ್‌ ವಿದ್ಯಾರ್ಥಿನಿ

Show More

Leave a Reply

Your email address will not be published. Required fields are marked *

Related Articles

Back to top button