Alma Corner

ತೆರೆಯ ಮೇಲೆ ಅಬ್ಬರಿಸಲು ರೆಡಿ ʼKD’..!!

ಬೆಂಗಳೂರು ಡಿ.15: ಬಹು ನಿರೀಕ್ಷಿತ ಚಿತ್ರವಾದ, ನಿರ್ದೇಶಕ ಪ್ರೇಮ್‌ ನಿರ್ದೇಶನದ ʼಕೆಡಿʼ ಚಿತ್ರತಂಡದ ಪತ್ರಿಕಾಗೋಷ್ಠಿ, ನಗರದ ಕ್ರೆಸೆಂಟ್‌ ಹೋಟೆಲ್‌ʼನಲ್ಲಿ ನಡೆಯಿತು. ಚಿತ್ರದ ನಾಯಕ ಧೃವ ಸರ್ಜಾ, ನಿರ್ದೇಶಕ ಪ್ರೇಮ್‌ ಹಾಗೂ ನಿರ್ಮಾಪಕ ಸುಪ್ರೀತ್‌ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು. ಚಿತ್ರ ಐದು ಭಾಷೆಗಳಲ್ಲಿ ತೆರೆಕಾಣಲಿದ್ದು, ʼಕೆವಿಎನ್‌ ಪ್ರೊಡಕ್ಷನ್‌ʼ ಚಿತ್ರ ನಿರ್ಮಾಣದ ಹೊಣೆ ಹೊತ್ತಿದೆ.

             ಈ ವೇಳೆ ಚಿತ್ರದ ನಿರ್ದೇಶಕ ಪ್ರೇಮ್‌ ಮಾತನಾಡಿ, “ಈಗಾಗಲೇ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಕೇವಲ ಎರಡು ಹಾಡುಗಳ ಚಿತ್ರೀಕರಣವಷ್ಟೇ ಬಾಕಿಯಿದೆ. ಚಿತ್ರದಲ್ಲಿ ಒಟ್ಟೂ 6 ಹಾಡುಗಳಿದ್ದು, ಇದು ಭಾರತದಲ್ಲೇ ದೊಡ್ಡ ಆಲ್ಬಮ್‌ʼಗಳಲ್ಲಿ ಒಂದಾಗಿರಲಿದೆ. ಹಾಡುಗಳಿಗಾಗಿಯೇ ಸುಮಾರು 250 ಜನ ತಂತ್ರಜ್ನರು, ಕೆಲಸ ಮಾಡಲಿದ್ದಾರೆ. ಹಾಡುಗಳನ್ನು ವಿಭಿನ್ನವಾಗಿ ಚಿತ್ರೀಕರಿಸಲಿದ್ದು, ಸುಮಾರು 1000 ಜನ ನೃತ್ಯ ಕಲಾವಿದರು ಭಾಗವಹಿಸಲಿದ್ದಾರೆ” ಎಂದರು. ಈ ವೇಳೆ ಚಿತ್ರದ ಹಿನ್ನಲೆ ಗಾಯಕರ ಬಗ್ಗೆಯೂ ಮಾತನಾಡಿದ ಪ್ರೇಮ್‌, “ವಿಜಯ್‌ ಪ್ರಕಾಶ್, ಶಂಕರ್‌ ಮಹದೇವನ್‌ʼ ಅನಿರುದ್ಧ್‌, ದೇವಿಶ್ರೀ ಪ್ರಸಾದ್‌ ಹೀಗೆ, ಆಯಾ ಭಾಷೆಯ ಪ್ರಸಿದ್ಧ ಗಾಯಕರು, ಆಯಾ ಭಾಷೆಯಲ್ಲಿ ಹಿನ್ನಲೆ ಧ್ವನಿ ನೀಡಿದ್ದಾರೆ. ಜನಪದ ಶೈಲಿಯಲ್ಲಿರುವ ಮೊದಲ ಹಾಡು ʼಶಿವ ಶಿವʼ, ಇದೇ ತಿಂಗಳ 24ಕ್ಕೆ ಬಿಡುಗಡೆಯಾಗಲಿದೆ ಎಂದು” ತಿಳಿಸಿದರು.

             ನಂತರ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ನಿರ್ಮಾಪಕ ಸುಪ್ರೀತ್‌, “ಚಿತ್ರವನ್ನು ದೊಡ್ಡ ಮಟ್ಟದಲ್ಲಿ ನಿರ್ಮಿಸಲಾಗುತ್ತಿದ್ದು, ಚಿತ್ರದ ಬಜೆಟ್‌ ಈಗಾಗಲೇ 100 ಕೋಟಿ ಮೀರಿದೆ. ನಾವು ಇಂತಿಷ್ಟೇ ಎಂದು ಬಜೆಟ್‌ ಬಗ್ಗೆ ಇತಿಮಿತಿ ಹಾಕಿಕೊಂಡಿಲ್ಲ. ನಾವು ಬೇರೆ ಭಾಷೆಯ ಸಿನಿಮಾಗಳ ಜೊತೆಗೆ ಸ್ಪರ್ಧಿಸಬೇಕಾದರೆ, ನಮ್ಮ ಚೌಕಟ್ಟನ್ನು ಮೀರಿ ಕೆಲಸ ಮಾಡಬೇಕು. ಆಗ ಮಾತ್ರ ಪ್ರೇಕ್ಷಕರಿಗೆ ಒಂದು ಉತ್ತಮ ಚಿತ್ರ ನೀಡಲು ಸಾಧ್ಯ. ಚಿತ್ರವನ್ನು ಮುಂದಿನ ಯುಗಾದಿಯ ವೇಳೆ ತೆರೆಗೆ ತರುವ ಯೋಜನೆ ಇದೆ” ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

             ಚಿತ್ರದ ನಾಯಕ ಧೃವ ಸರ್ಜಾ ಮಾತನಾಡುತ್ತಾ, “ಈ ಸಿನಿಮಾದ ಹಾಡುಗಳ ಚಿತ್ರೀಕರಣದಲ್ಲಿ, ಸುಮಾರು ಸಾವಿರಕ್ಕೂ ಹೆಚ್ಚು ನೃತ್ಯ ಕಲಾವಿದರು ಭಾಗವಹಿಸುತ್ತಿರುವುದು ಹೆಮ್ಮೆಯ ವಿಷಯ. ನನ್ನ ಸಿನಿಮಾ ತಡವಾಗುತ್ತದೆ ಎನ್ನವುದು ಕೆಲವರ ಅಂಬೋಣ, ಆದರೆ ಇದಕ್ಕೆ ಯಾರನ್ನೂ ದೂಷಿಸುವ ಕೆಲಸ ಮಾಡುವುದಿಲ್ಲ. ಪ್ರೇಕ್ಷಕರಿಗೆ ಕೇವಲ ಒಳ್ಳೆಯ ಸಿನಿಮಾ ನೀಡಬೇಕು, ಪ್ರತೀ ಪಾತ್ರಕ್ಕೂ ನ್ಯಾಯ ಒದಗಿಸಬೇಕು ಎಂಬುದಷ್ಟೇ ನಮ್ಮ ಉದ್ದೇಶ. ಮುಂದಿನ ವರ್ಷ 5-6 ತಿಂಗಳಿಗೊಂದರಂತೆ, ನನ್ನ ಎರಡರಿಂದ ಮೂರು ಸಿನಿಮಾಗಳು ಬಿಡುಗಡೆಯಾಗುತ್ತವೆ. ಕನಿಷ್ಠ ಎರಡು ಚಿತ್ರಗಳಾದರೂ ಖಚಿತವಾಗಿ ಬಿಡುಗಡೆಯಾಗುತ್ತವೆ” ಎಂದರು. ಈ ವೇಳೆ ತಮ್ಮ ಹೋಮ್‌ ಬ್ಯಾನರ್‌ʼನಲ್ಲೇ, ಮಾವ ಅರ್ಜುನ್‌ ಸರ್ಜಾ ಅವರ ಜೊತೆ ಚಿತ್ರ ಮಾಡುವ ಸಾಧ್ಯತೆಯ ಬಗ್ಗೆಯೂ ತಿಳಿಸಿದರು.

             ಚಿತ್ರದ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದ ನಿರ್ದೇಶಕ ಪ್ರೇಮ್‌, “ಇದೊಂದು ಔಟ್‌ ಎಂಡ್‌ ಔಟ್‌ ಕಮರ್ಷಿಯಲ್‌ ಚಿತ್ರವಾಗಿದ್ದು, ಇದರಲ್ಲಿ ಯಾವುದೇ ಸಂದೇಶ ನೀಡುವ ಪ್ರಯತ್ನ ಮಾಡಿಲ್ಲ. ಇದೊಂದು 70-80ರ ದಶಕದ ಮಧ್ಯದಲ್ಲಿ ನಡೆಯುವ ಕಥೆಯಾಗಿದ್ದು, ಕೆಲವು ಘಟನೆಗಳು ಎಲ್ಲೋ ಹೋಲಿಕೆಯಾದಂತೆ ಕಂಡರೂ, ಅದು ಯಾರಿಗೂ ನೇರವಾಗಿ ಸಂಬಂಧಿಸಿದ್ದಲ್ಲ. ಕಥಾ ನಾಯಕ ʼಕಾಳಿದಾಸʼನ ಪಾತ್ರ ನೈಜ ಘಟನೆಯಾಧಾರಿತ ಪಾತ್ರವಾಗಿದ್ದು, ಪಾತ್ರದ ಹೆಸರನ್ನು ಮಾತ್ರ ʼಕಾಳಿದಾಸʼ ಎಂದು ಬದಲಾಯಿಸಿದ್ದೇವೆ. ಚಿತ್ರದ ನಾಯಕ ಧೃವ ಸೇರಿದಂತೆ, ಪ್ರಮುಖ ಕಲಾವಿದರು ಆಯಾ ಭಾಷೆಗಳಲ್ಲೇ ಡಬ್ಬಿಂಗ್‌ ಮಾಡಲಿದ್ದಾರೆ. ಪಾತ್ರಗಳ ಧ್ವನಿ, ಚಿತ್ರದ ಸನ್ನಿವೇಶಗಳಲ್ಲಿ ನಾಟಕೀಯ ಎನ್ನಿಸಬಾರದು ಅನ್ನುವ ಉದ್ದೇಶದಿಂದ, AI ತಂತ್ರಜ್ನಾನವನ್ನು ಬಳಸಿಕೊಂಡು, ಆಯಾ ಪ್ರಮುಖ ಕಲಾವಿದರ ಧ್ವನಿಯನ್ನೇ ಎಲ್ಲಾ ಭಾಷೆಗಳಲ್ಲಿಯೂ ಅಳವಡಿಸುವ ಪ್ರಯತ್ನ ನಡೆದಿದೆ” ಎಂದು ಮಾಹಿತಿ ನೀಡಿದರು.

            ಚಿತ್ರದಲ್ಲಿ ರಕ್ತಪಾತ ಅಧಿಕವಾಗಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಪ್ರೇಮ್‌, “ಪ್ರೇಕ್ಷಕರು ಕುಟುಂಬ ಸಮೇತರಾಗಿ ಚಿತ್ರ ನೋಡಬೇಕೆಂಬುದೇ ನಮ್ಮ ಆಸೆ, ಹಾಗಾಗಿ ಕೇವಲ ಸನ್ನಿವೇಶಗಳಿಗೆ ತಕ್ಕಂತೆ ಮಾತ್ರ ರಕ್ತಪಾತ ದೃಶ್ಯಗಳನ್ನು ತೋರಿಸಲಾಗಿದೆಯೇ ಹೊರತು, ರಕ್ತಪಾತವನ್ನೇ ವೈಭವೀಕರಿಸಿಲ್ಲ” ಎಂದರು. ಇದೇ ವೇಳೆ ಚಿತ್ರದ ಕಥೆಯೇ ಆ ರೀತಿ ಇರುವುದರಿಂದ, ಚಿತ್ರವನ್ನು ಎರಡು ಭಾಗಗಳಲ್ಲಿ ನಿರ್ಮಿಸುತ್ತಿರುವುದಾಗಿಯೂ, ಅದಕ್ಕಾಗಿಯೇ ನಿರ್ಮಾಪಕರು ಸುಮಾರು 20 ಎಕರೆಯಷ್ಟು ಸೆಟ್‌ ಹಾಕಿರುವುದರ ಬಗ್ಗೆಯೂ ಮಾಹಿತಿ ನೀಡಿದರು.

           ಕೊನೆಯಲ್ಲಿ “ಚಿತ್ರವನ್ನು ದೊಡ್ಡ ಮಟ್ಟದಲ್ಲಿ ನಿರ್ಮಿಸಿದ್ದೇವೆ. ಹೇಗೆ ಪರ ಭಾಷಾ ಸಿನಿಮಾಗಳಿಗೆ ನೀವೆಲ್ಲಾ ಬೆಂಬಲಿಸುತ್ತೀರೋ, ಅದೇ ರೀತಿ ನಮ್ಮ ಚಿತ್ರಕ್ಕೂ ನಿಮ್ಮ ಬೆಂಬಲ ಇರಲಿ” ಎಂದು ನಿರ್ದೇಶಕ ಪ್ರೇಮ್‌ ವಿನಂತಿಸಿದರು.

           ʼKDʼ ಚಿತ್ರಕ್ಕೆ ಪ್ರೇಮ್‌ ನಿರ್ದೇಶನವಿದ್ದು, ತಾರಾಗಣದಲ್ಲಿ ಧೃವ ಸರ್ಜಾ, ರಮೇಶ್‌ ಅರವಿಂದ್‌, ವಿ.ರವಿಚಂದ್ರನ್‌, ಸಂಜಯ್‌ ದತ್, ರೀಷ್ಮಾ ನಾಣಯ್ಯ, ಶಿಲ್ಪಾ ಶೆಟ್ಟಿ, ನೋರಾ ಫತೇಹಿ, ಜಿಸ್ಸು ಸೇನ್‌ʼಗುಪ್ತಾ ಮುಂತಾದವರಿದ್ದಾರೆ. ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತವಿದ್ದು, ಕ್ರಾಂತಿಕುಮಾರ್‌ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.

ಗಜಾನನ ಭಟ್‌

ಆಲ್ಮಾ ಮೀಡಿಯಾ ಸ್ಕೂಲ್‌ ವಿದ್ಯಾರ್ಥಿ

Show More

Leave a Reply

Your email address will not be published. Required fields are marked *

Related Articles

Back to top button