ಬಡತನವನ್ನು ಬಹುತೇಕ ನಿರ್ಮೂಲನೆ ಮಾಡಿದ ಕೇರಳ ಮತ್ತು ಗೋವಾ !

ಭಾರತದ ಪ್ರಮುಖ ಸಮಸ್ಯೆಯಾದ ಬಡತನವನ್ನು ಕೇರಳ ಮತ್ತು ಗೋವಾ ರಾಜ್ಯಗಳು ಬಹುತೇಕ ನಿರ್ಮೂಲನೆ ಮಾಡಿವೆ. ಈ ಮೂಲಕ ಹೊಸ ಮೈಲಿಗಲ್ಲನ್ನು ಸೃಷ್ಟಿ ಮಾಡಿವೆ. ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ ಕೇರಳದ ಬಡತನ ಪ್ರಮಾಣ 0.71% ಗೆ ಇಳಿಕೆಯಾಗಿ ದೇಶದಲ್ಲೆ ಅತಿ ಕಡಿಮೆ ಬಡತನ ಹೊಂದಿದ ರಾಜ್ಯವಾಗಿ ಹೊರಹೊಮ್ಮಿದೆ. ಇನ್ನು ಪುಟ್ಟ ರಾಜ್ಯ ಗೋವಾ 3.76% ಬಡತನವನ್ನು ಹೊಂದಿ 2ನೇ ಸ್ಥಾನದಲ್ಲಿದೆ. ನೀತಿ ಆಯೋಗದ ಬಹು ಆಯಾಮದ ಬಡತನದ ಸೂಚ್ಯಂಕದ ಪ್ರಕಾರ ಕೇರಳದ ಕೊಟ್ಟಾಯಂ ಜಿಲ್ಲೆ ಭಾರತದಲ್ಲೇ ಬಡವರಿಲ್ಲದ ಏಕೈಕ ಜಿಲ್ಲೆ ಎಂಬ ಬಿರುದನ್ನ ಪಡೆದಿದೆ. ಇನ್ನು ಬಿಹಾರ ರಾಜ್ಯ ಅತ್ಯಂತ ಹೆಚ್ಚಿನ ಬಡತನ ಹೊಂದಿದ್ದು 33.8% ಬಡತನ ಪ್ರಮಾಣವನ್ನ ಹೊಂದಿದೆ, ಹಾಗೂ 28.8% ಬಡತನ ಪ್ರಮಾಣವನ್ನು ಹೊಂದಿ ಜಾರ್ಖಂಡ್ 2ನೇ ಸ್ಥಾನದಲ್ಲಿದೆ. ಬಿಹಾರ ರಾಜ್ಯದ 30% ಗೂ ಅಧಿಕ ಜನ ಮೂಲಸೌಕರ್ಯದ ಅಭಾವದೊಂದಿಗೆ ಹೊರಾಟ ಮಾಡುತ್ತಿದ್ದು, ಇದು ಅಲ್ಲಿನ ಜನರ ಜೀವನದ ಮೇಲೆ ಪರಿಣಾಮ ಬೀರುತ್ತಿದೆ. ಈ ಸಮಸ್ಯೆಯನ್ನು ಕೇರಳದ 0.6% ಜನ ಮಾತ್ರ ಎದುರಿಸುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಕೇರಳ ಮತ್ತು ಗೋವಾ ರಾಜ್ಯಗಳು ಬಡತನವನ್ನು ಬಹುತೇಕ ನಿರ್ಮೂಲನೆ ಮಾಡಿದ್ದು ಆರ್ಥಿಕತೆಯ ಹೋರಾಟದಲ್ಲಿ ಬೇರೆ ರಾಜ್ಯಗಳಿಗೆ ಮಾದರಿಯಾಗಿವೆ. ಈ ಶ್ರೀಮಂತಿಕೆಯ ಸಾಧನೆಗೆ ಕಾರಣವಾದ ಪ್ರಮುಖ ಅಂಶಗಳು ಏನು ? ಜನರ ಜೀವನ ಮಟ್ಟವನ್ನು ಸುಧಾರಿಸಲು ಈ ಎರಡು ರಾಜ್ಯಗಳು ತೆಗೆದುಕೊಂಡ ರೀತಿ ನೀತಿಗಳು ಏನು ? ಕೇರಳ ಮತ್ತು ಗೋವಾ ರಾಜ್ಯಗಳು ಬಡತನ ನಿರ್ಮೂಲನೆಗೆ ತೆಗೆದುಕೊಂಡ ನಿರ್ಧಾರಗಳನ್ನು ಭಾರತದ ಇತರೆ ರಾಜ್ಯಗಳು ಪಾಲಿಸಲು ಸಾಧ್ಯವೆ ?
ದೇವರ ನಾಡು ಕೇರಳ ಮತ್ತು ಪ್ರವಾಸಿಗರ ಸ್ವರ್ಗ ಗೋವಾ ರಾಜ್ಯಗಳು ಮೊದಲನೆಯದಾಗಿ ಜನಸಂಖ್ಯೆ ನಿಯಂತ್ರಣ ಮಾಡುವಲ್ಲಿ ಯಶಸ್ವಿಯಾಗಿವೆ. ಭಾರತದಲ್ಲೆ ಅತಿ ಹೆಚ್ಚು ಸಾಕ್ಷರತೆಯನ್ನು ಕೇರಳ ಹೊಂದಿದೆ, ಮತ್ತು ಇಲ್ಲಿನ ಭೂ ಸುಧಾರಣೆಗಳು, ಸಾರ್ವತ್ರಿಕ ಶಿಕ್ಷಣ, ಆರೋಗ್ಯ ರಕ್ಷಣೆ, ಅಧಿಕಾರದ ವಿಕೇಂದ್ರಿಕರಣ, ಸಾಮಾಜಿಕ ಭದ್ರತೆ ವ್ಯವಸ್ಥೆ, ಸಾರ್ವಜನಿಕ ವಿತರಣಾ ವ್ಯವಸ್ಥೆ, ಸ್ವಸಹಾಯ ಗುಂಪುಗಳ ಮೂಲಕ ಮಹಿಳೆಯರನ್ನು ಸಬಲಿಕರಣಗೊಳಿಸುವ ಕುಟುಂಬಶ್ರೀ ಮತ್ತು ಸಾರ್ವತ್ರಿಕ ಪಿಂಚಣಿ ಯೋಜನೆಗಳು ರಾಜ್ಯದ ಬಡವರನ್ನು ಮೇಲೆತ್ತುವ ಕೆಲಸಗಳನ್ನು ಮಾಡುತ್ತಿವೆ. ಇನ್ನೂ ಪ್ರವಾಸಿಗರ ಹಾಟ್‌ಸ್ಪಾಟ್ ಆದ ಗೋವಾ ರಾಜ್ಯದಲ್ಲಿ ಕೇವಲ 16 ಲಕ್ಷ ಜನಸಂಖ್ಯೆ ಇರುವುದು ಬಡತನ ನಿರ್ಮೂಲನೆಗೆ ಪ್ರಮುಖ ಕಾರಣ. ಮತ್ತು ಆರ್ಥಿಕವಾಗ ಈ ರಾಜ್ಯ ಸಬಲಗೊಳ್ಳಲು ಮತ್ತೊಂದು ಕಾರಣ ಇಲ್ಲಿನ ಪ್ರವಾಸೋದ್ಯಮ. ಹಾಗೂ ಆರ್ಥಿಕ ಸಬಲತೆಗೆ ಗೋವಾ ಸರ್ಕಾರ ಕೈಗೊಳ್ಳುವ ಹಲವು ನೀತಿಗಳು ಮತ್ತು ಯೋಜನೆಗಳು ಬಡತನ ನಿರ್ಮೂಲನೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ. ಬಡ್ಡಿ ರಹಿತ ಶಿಕ್ಷಣ ಸಾಲಗಳು, ವಿದ್ಯಾರ್ಥಿವೇತನ ಯೋಜನೆಗಳು, ಅಟಲ್ ಆಸ್ರ ಯೋಜನೆ, ಬೀಜ ಬಂಡವಾಳ ಯೋಜನೆ ಹೀಗೆ ಹಲವು ಆರ್ಥಿಕ ಅಭಿವೃದ್ಧಿ ನೀತಿಗಳನ್ನು ಜಾರಿ ಮಾಡುವ ಮೂಲಕ ಗೋವಾ ಬಡತನ ನಿರ್ಮೂಲನೆಯ ರಾಜ್ಯಗಳ ಪಟ್ಟಿಯಲ್ಲಿ 2ನೇ ಸ್ಥಾನವನ್ನು ಗಿಟ್ಟಿಸಿಕೊಂಡಿದೆ.

ಹಾಗಾದರೆ ದೇಶದ ಇತರೆ ರಾಜ್ಯಗಳಿಗೆ ಆರ್ಥಿಕ ಸಾಧನೆಗೆ ಮಾದರಿಯಾಗಿರುವ ಕೇರಳ ಮತ್ತು ಗೋವಾ ರಾಜ್ಯಗಳ ನೀತಿಗಳನ್ನು ಉಳಿದ ರಾಜ್ಯಗಳು ಅನುಸರಿಸಬಹುದಾ ? ಈ ಸಾಧನೆಯ ಹಾದಿಯನ್ನು ಭಾರತದ ಇತರೆ ರಾಜ್ಯಗಳು ಪಾಲಿಸಿದರೆ, ಭಾರತದ ಬಹು ದೊಡ್ಟ ಸಮಸ್ಯೆಯಾದ ಬಡತನವನ್ನು ಯಶಸ್ವಿಯಾಗಿ ನಿರ್ಮೂಲನೆ ಮಾಡಬಹುದಾ ? ಎಂಬ ಪ್ರಶ್ನೆ ಮೂಡಿದೆ.
ಕೇರಳ ಮತ್ತು ಗೋವಾ ರಾಜ್ಯಗಳಿಗೆ ಬಡತನ ನಿರ್ಮೂಲನೆಯಲ್ಲಿ ಹೆಸರು ಮಾಡಲು ಕಾರಣವಾದ ಪ್ರಮುಖ ಅಂಶವೆಂದರೆ ಅದು ಜನಸಂಖ್ಯೆ ನಿಯಂತ್ರಣ. ಭಾರತದ ಕೆಲವು ರಾಜ್ಯಗಳಲ್ಲಿಯೂ ಜನಸಂಖ್ಯೆ ಕಡಿಮೆ ಇದೆ ಪ್ರಮುಖವಾಗಿ ಸಿಕ್ಕಿಂ, ಮಿಜೊರಂ, ಅರುಣಾಚಲಪ್ರದೇಶ, ನಾಗಲ್ಯಾಂಡ್, ಮಣಿಪುರ, ಮೇಘಾಲಯ, ತ್ರಿಪುರ, ಹಿಮಾಚಲ ಪ್ರದೇಶಗಳಂತ ರಾಜ್ಯಗಳು ಭಾರತದ ಅತ್ಯಂತ ಕಡಿಮೆ ಜನಸಂಖ್ಯೆ ಹೊಂದಿರುವ ಪಟ್ಟಿಯಲ್ಲಿವೆ. ಆದರೆ ಇಲ್ಲಿ ಬಡತನ ನಿರ್ಮೂಲನೆ ಮಾಡಲು ಸಾಧ್ಯವಾಗುತ್ತಿಲ್ಲ ಏಕೆಂದರೆ ಈ ಎಲ್ಲಾ ರಾಜ್ಯಗಳು ಬಹುತೇಕ ಅಂತರಾಷ್ಟ್ರೀಯ ಗಡಿಗಳನ್ನು ಹೊಂದಿರುವುದೆ ಪ್ರಮುಖ ಕಾರಣ. ಹಾಗೂ ಬೆಟ್ಟ ಗುಡ್ಡ ಕಣಿವೆ ಪ್ರದೇಶಗಳಿಂದ ಕೂಡಿದ ಇಲ್ಲಿನ ಪ್ರಕೃತಿಯೂ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ತೊಡಕನ್ನ ಉಂಟ್ಟುಮಾಡುತ್ತಿದೆ. ಇನ್ನೂ ಕೇಲವು ಕಾರಣಗಳು ಕೂಡ ಇಲ್ಲಿನ ಜನರನ್ನ ಇನ್ನೂ ಬಡತನದ ಬವಣೆಯಲ್ಲೆ ಬೆಯುವಂತ್ತೆ ಮಾಡುತ್ತಿವೆ. ಜನಾಂಗೀಯ ಶೋಷಣೆ, ಮೂಲಸೌಕರ್ಯ, ಆರ್ಥಿಕ ಅವಕಾಶಗಳ ಕೊರತೆ, ಹವಾಮಾನ ವೈಪರಿತ್ಯ, ಕಡಿಮೆ ಸಾಕ್ಷರತೆ, ರಾಜಕೀಯ ಅಂಶಗಳು, ಜನರ ವಲಸೆ ಹೀಗೆ ಸರ್ಕಾರ ಎಷ್ಟೇ ರೀತಿ ನೀತಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡರೂ ಇಲ್ಲಿನ ಪ್ರಕೃತಿಯೂ ಒಂದು ದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ. ಒಟ್ಟಿನಲ್ಲಿ ಜನಸಂಖ್ಯೆ ಕಡಿಮೆ ಇದ್ದರು ಪೂರ್ವ ಭಾರತದ ರಾಜ್ಯಗಳೂ ಬಡತನದಿಂದ ತಪ್ಪಿಸಿಕೊಳ್ಳಲು ಸಾದ್ಯವಾಗುತ್ತಿಲ್ಲ.

ಆರ್ಥಿಕತೆಯಲ್ಲಿ ಉತ್ತಮ ಎನ್ನಿಸಿಕೊಂಡ ದಕ್ಷಿಣದ ರಾಜ್ಯಗಳಲ್ಲಿಯೂ ಇನ್ನೂ ಸಂಪೂರ್ಣವಾಗಿ ಬಡತನ ನಿರ್ಮೂಲನೆಯಾಗಿಲ್ಲ. ದೇಶದ ಆರ್ಥಿಕತೆಗೆ ಕೊಡುಗೆ ನೀಡುವ ರಾಜ್ಯಗಳಲ್ಲಿ ದಕ್ಷಿಣದ ರಾಜ್ಯಗಳದ್ದೆ ಸಿಂಹಪಾಲು. ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ರಾಜ್ಯಗಳು ಆರ್ಥಿಕವಾಗಿ ಸದೃಡವಾಗಿದ್ದರು ಈ ರಾಜ್ಯದ ಗ್ರಾಮಿಣ ಪ್ರದೇಶಗಳಲ್ಲಿ ಇನ್ನೂ ಬಡತನ ನಿವಾರಿಸಲು ಸಾಧ್ಯವಾಗಿಲ್ಲ. ಹಣಕಾಸು ವಿಕೇಂದ್ರಿಕರಣ, ರಾಜಕೀಯ ಸ್ಥಿರತೆ ಮತ್ತು ಆಡಳಿತ, ಸರ್ಕಾರದ ಯೋಜನೆಗಳ ಅನುಷ್ಠಾನಗೊಳಿಸುವಲ್ಲಿನ ಸವಾಲುಗಳು, ದಕ್ಷಿಣದ ರಾಜ್ಯಗಳಿಗೆ ವಲಸೆ ಬರುವುದು ಹೀಗೆ ಹಲವು ಕಾರಣಗಳಿಂದ ದಕ್ಷಿಣ ಭಾರತದ ಗ್ರಾಮಿಣ ಪ್ರದೇಶದಲ್ಲಿ ಬಡತನ ಇನ್ನೂ ಜೀವಂತವಾಗಿದೆ. ಗ್ರಾಮಿಣ ಪ್ರದೇಶದಲ್ಲಿನ ಬಡತನ ನಿರ್ಮೂಲನೆ ಮಾಡುವಲ್ಲಿ ಸರ್ಕಾರ ಇನ್ನೂ ಎಡುವುತ್ತಲೇ ಇದೆ.

ಒಟ್ಟಿನಲ್ಲಿ ಕೇರಳ ಮತ್ತು ಗೋವಾ ರಾಜ್ಯಗಳು ಬಡತನದಿಂದ ಬಹುತೇಕ ಮುಕ್ತಿ ಹೊಂದಿವೆ. ಆದರೆ ಕೇರಳ ಮತ್ತು ಗೋವಾ ಅನುಸರಿಸಿದ ನೀತಿ, ನಿಯಮ, ಯೋಜನೆಗಳನ್ನು ದೇಶದ ಇತರೆ ರಾಜ್ಯಗಳು ಅನುಸರಿಸುವುದು ಸುಲಭವಲ್ಲ. ಆರ್ಥಿಕ ಅಭಿವೃದ್ಧಿಯ ಕೇಂದ್ರ ಬಿಂದುವಾಗಿರುವ ದಕ್ಷಿಣ ಭಾರತವೂ ಬಡತನ ನಿರ್ಮೂಲನೆಯಲ್ಲಿ ವಿಫಲವಾಗುತ್ತಿದೆ. ಅಂತರಾಷ್ಟ್ರೀಯ ಗಡಿ ಸಮಸ್ಯೆ, ನಿಸರ್ಗದ ಸವಾಲುಗಳಿಂದ ಪೂರ್ವ ಭಾರತ ಹಿಂದೆ ಬಿದ್ದರೆ, ಅತಿಯಾದ ಜನಸಂಖ್ಯೆ, ಕಡಿಮೆ ತಲಾ ಆದಾಯ, ನಿರುದ್ಯೋಗ, ಆರೋಗ್ಯ, ಜಾತಿ ವ್ಯವಸ್ಥೆ, ಹೂಡಿಕೆ ಕೊರತೆ, ವಲಸೆ ಹೀಗೆ ನಾನ ಕಾರಣಗಳಿಂದ ಅತಿ ಹೆಚ್ಚು ಬಡತನ ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಉತ್ತರದ ರಾಜ್ಯಗಳು ಅಗ್ರ ಸ್ಥಾನ ಪಡಿದಿವೆ. ಮುಂದಿನ ದಿನಗಳಲ್ಲಿ ಕೇರಳ ಮತ್ತು ಗೋವಾ ರಾಜ್ಯಗಳಂತೆ, ದೇಶದ ಇತರೆ ರಾಜ್ಯಗಳು ಬಡತನ ನಿರ್ಮೂಲನೆಗೆ ಇಡುವ “ಶ್ರೀಮಂತ ಹೆಜ್ಜೆ” ಅ ರಾಜ್ಯವನ್ನು ಬಡತನದ ಬಂಧನದಿಂದ ಮುಕ್ತಿಗೊಳಿಸುತ್ತಾ ಕಾದು ನೋಡಬೇಕು.
ಲೋಕನಾಥ್ ಹೂಗಾರ್
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿ