ಬಳ್ಳಾರಿಯಲ್ಲಿ ಮತ್ತೊಂದು ಬಾಣಂತಿಯ ಸಾವು…5ಕ್ಕೇರಿದ ಸಾವಿನ ಸಂಖ್ಯೆ..!
(ಡಿ 5) ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಮೃತಪಟ್ಟಿದ್ದಾರೆ. ಈ ಮೂಲಕ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸಾವಿನ ಸಂಖ್ಯೆ 5ಕ್ಕೆ ಏರಿದೆ.
ಕೂಡ್ಲಿಗಿ ನಿವಾಸಿ ಸುಮಯ್ಯ ನವೆಂಬರ್ 10 ರಂದು ಆಸ್ಪತ್ರೆಗೆ ದಾಖಲಾಗಿದ್ದು, ಅದೇ ದಿನ ಅವರಿಗೆ ಸಿಸೇರಿಯನ್ ಮಾಡಲಾಗಿತ್ತು. ಸಿಸೇರಿಯನ್ ಆದ ಬಳಿಕ ಆರೋಗ್ಯದಲ್ಲಿ ಏರು-ಪೇರು ಆಗಿದೆ ಎಂದು ಸುಮಯ್ಯ ಅವರನ್ನು ಬಳ್ಳಾರಿ ವೈದ್ಯಕಿಯ ಕಾಲೇಜು ಮತ್ತು ಸಂಶೋಧನಾ ಕೇಂದ್ರಕ್ಕೆ (BMCRC) ಸ್ಥಳಾಂತರಿಸಿ, ಅವರನ್ನು ICUನಲ್ಲಿ ಇರಿಸಲಾಯಿತು. ಸುಮಯ್ಯ ಡಯಾಲಿಸಿಸ್‌ಗೆ ಒಳಗಾಗಿದ್ದರು.
“ರೋಗಿಯು ಬಹು ಅಂಗಾಂಗ ವೈಫಲ್ಯ ಹೊಂದಿದ್ದು, ಆಕೆಯನ್ನು ರಕ್ಷಿಸಲು ವೈದ್ಯರು ಪ್ರಯತ್ನ ಪಟ್ಟರೂ ಸಹ ಚಿಕಿತ್ಸೆ ಫಲಕಾರಿಯಾಗದೆ, ಗುರುವಾರ ರಾತ್ರಿ ಸುಮಾರು 8 ಗಂಟೆಗೆ ಮೃತಪಟ್ಟರು” ಎಂದು BMCRC ನಿರ್ದೇಶಕ ಟಿ. ಗಂಗಾಧರ್ ಗೌಡ ತಿಳಿಸಿದರು.
ಐವರು ಬಾಣಂತಿಯರ ಸಾವು..!
ನವೆಂಬರ್ 9 ರಿಂದ 11ರ ನಡುವೆ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಸಿಸೇರಿಯನ್ ಶಸ್ತ್ರಚಿಕಿತ್ಸೆ ನಡೆಯುವ ವೇಳೆಯಲ್ಲಿ ತಾಯಂದಿರ ಸಾವುಗಳು ಅನಿರೀಕ್ಷಿತವಾಗಿ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡುರಾವ್, ಈ ಹಿಂದೆ ತಿಳಿಸಿದ್ದರು. 34 ಶಸ್ತ್ರಚಿಕಿತ್ಸೆಗಳಲ್ಲಿ, 7 ರೋಗಿಗಳು ತೀವ್ರ ತೊಂದರೆಗಳನ್ನು ಅನುಭವಿಸಿದ್ದರು ಹಾಗೂ 4 ತಾಯಂದಿರು ಮೃತಪಟ್ಟಿದ್ದಾರೆ.
ಸುಮಯ್ಯ ಅವರ ಸಾವಿನೊಂದಿಗೆ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ನವ ತಾಯಂದಿರ ಸಾವಿನ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಐವರಲ್ಲಿ ಇಬ್ಬರು ತಾಯಂದಿರು ಡಿಸ್ಚಾರ್ಜ್ ಆದ ಬಳಿಕ ಮೃತಪಟ್ಟರು ಎಂದು ರಾಜ್ಯ ಆರೋಗ್ಯ ಅಧಿಕಾರಿಗಳು ವರದಿ ಸಲ್ಲಿಸಿದ್ದರು.
IV ದ್ರವದಿಂದ ದೋ಼ಷ..?
ಪಶ್ಚಿಮ ಬಂಗಾಳ ಫಾರ್ಮಾಸ್ಯುಟಿಕಲ್ ಕಂಪನಿಯಿಂದ ಆಸ್ಪತ್ರೆಗಳಿಗೆ ಸರಬರಾಜು ಆಗಿರುವ ʼರಿಂಗರ್ ಲ್ಯಾಕ್ಟೇಟ್ ದ್ರಾವಣ IVʼ ದ್ರವವನ್ನು ನೀಡಿದ ನಂತರ ಬಾಣಂತಿಯರ ಸ್ಥಿತಿ ಇನ್ನೂ ಹದಗೆಟ್ಟಿದೆ ಎಂದು ರಾಜ್ಯ ಆರೋಗ್ಯ ಅಧಿಕಾರಿಗಳು ಶಂಕಿಸಿದ್ದಾರೆ. ಕರ್ನಾಟಕ ಸರ್ಕಾರ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ನಿಂದ ಈ ಸಾವುಗಳನ್ನು ಕುರಿತು ಸ್ಪಷ್ಟೀಕರಣವನ್ನು ಕೇಳಿದೆ.
ಈ ಕುರಿತು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ, ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ರಾಜೀವ್ ಸಿಂಗ್ ರಘುವಂಶಿಗೆ ಪತ್ರ ಬರೆದಿದ್ದಾರೆ.
ಪಶ್ಚಿಮ ಬಂಗಾಳ ಫಾರ್ಮಾಸ್ಯುಟಿಕಲ್ ಕಂಪನಿಯಿಂದ ಸರಬರಾಜು ಆಗಿರುವ ದ್ರವದ 192 ಬ್ಯಾಚ್‌ಗಳ ಪೈಕಿ 22 ಬ್ಯಾಚ್‌ಗಳ ಗುಣಮಟ್ಟ ಕಳಪೆಯಾಗಿದೆ ಎಂದು ರಾಜ್ಯ ಔಷಧ ನಿಯಂತ್ರಣ ಇಲಾಖೆ ಗುರುತಿಸಿದೆ. ಈ ನಡುವೆ ಮುನ್ನೆಚರಿಕಾ ಕ್ರಮವಾಗಿ, ಆ ಬ್ಯಾಚ್‌ಗಳನ್ನು ಕಪ್ಪುಪಟ್ಟಿಗೆ ಸೇರಿಸಿ ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲಿ ಆ ದ್ರವದ ಬಳಕೆಯನ್ನು ತಕ್ಷಣಕ್ಕೆ ನಿಲ್ಲಿಸಬೇಕೆಂದು ರಾಜ್ಯ ಸರ್ಕಾರ ನಿರ್ದೇಶಿಸಿದೆ.
ಧನ್ಯಾ ರೆಡ್ಡಿ
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿನಿ