ರಾಜಕೀಯ ಕ್ಷೇತ್ರದ ಧೀಮಂತ ನಾಯಕ ಎಸ್.ಎಂ ಕೃಷ್ಣ…!
ಎಸ್.ಎಂ ಕೃಷ್ಣ (ಸೋಮೇನಹಳ್ಳಿ ಮಲ್ಲಯ್ಯ ಕೃಷ್ಣ) ಅವರನ್ನು ಐಟಿ ಪಿತಾಮಹ ಎಂದು ಕರೆಯಬಹುದು. ಎಸ್.ಎಂ ಕೃಟ್ಣ ಅವರು ಕರ್ನಾಟಕವನ್ನು, ವಿಶೇಷವಾಗಿ ಬೆಂಗಳೂರನ್ನು ದೇಶದ ಐಟಿ ಕ್ಯಾಪಿಟಲ್ ಮಾಡುತ್ತೇನೆ ಎಂದು ಮುನ್ನುಗ್ಗಿ ಯಾವ ರೀತಿಯಲ್ಲಿ ಕೆಲಸಗಳನ್ನು ಮಾಡಿದರು. ಅವರ ಅವಧಿಯಲ್ಲಿ ಏನೆಲ್ಲಾ ಪ್ರಮುಖ ಬೆಳವಣಿಗೆಗಳು ಆದವು ? ಎಂಬುದನ್ನು ನೋಡೋಣ.
ಎಸ್.ಎಂ ಕೃಷ್ಣ ಮೇ 1, 1932 ರಲ್ಲಿ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಸೋಮನಹಳ್ಳಿಯಲ್ಲಿ ಜನಿಸಿದರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿಎ ಪದವಿಯನ್ನು ಪಡೆದರು. ನಂತರ ಬೆಂಗಳೂರಿನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿಯನ್ನು ಪಡೆದರು. ಬಳಿಕ ಉನ್ನತ ಶಿಕ್ಷಣಕ್ಕಾಗಿ ಅಮೆರಿಕಾಗೆ ಹೋಗಿ ಟೆಕ್ಸಾಸ್ ರಾಜ್ಯದ ಡಲಾಸ್‌ನಲ್ಲಿರುವ ಸದರ್ನ್ ಮೆಥಡಿಸ್ಟ್ ಯೂನಿವರ್ಸಿಟಿಯಲ್ಲಿ ಪದವಿಯನ್ನು ಪಡೆದರು. ನಂತರ ವಾಷಿಂಗ್‌ಟನ್ ಡಿಸಿ ಯಲ್ಲಿರುವ ಜಾರ್ಜ್ ವಾಷಿಂಗ್‌ಟನ್ ಯೂನಿವರ್ಸಿಟಿಯ ಕಾನೂನು ಶಾಲೆಯಲ್ಲೆ ಶಿಕ್ಷಣವನ್ನು ಪಡೆದರು.
ಅಮೆರಿಕಾದಲ್ಲಿ ಶಿಕ್ಷಣವನ್ನು ಮುಗಿಸಿ ಭಾರತಕ್ಕೆ ಹಿಂದಿರುಗಿದ ಎಸ್.ಎಂ ಕೃಷ್ಣ ನೇರವಾಗಿ ಚುನಾವಣೆಗೆ ನಿಂತರು. 1962 ರಲ್ಲಿ ಮದ್ದೂರು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದರು. ನಂತರ ಪ್ರಜಾ ಸೋಷಿಯಲಿಸ್ಟ್ ಪಕ್ಷವನ್ನು ಸೇರಿದರು. 1967ರ ವಿಧಾನಸಭಾ ಚುನಾವಣೆಯಲ್ಲಿ ಪ್ರಜಾ ಸೋಷಿಯಲಿಸ್ಟ್ ಪಕ್ಷದಿಂದ ಮದ್ದೂರು ಕ್ಷೇತ್ರದಲ್ಲಿ ಸ್ಪರ್ದಿಸಿ ಸೋತರು. 1968 ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಿತು ಆಗ ಗೆದ್ದು ಸಂಸತ್ತನ್ನು ಪ್ರವೇಶ ಮಾಡಿದರು. ನಂತರ 1971 ರಲ್ಲಿ ಪ್ರಜಾ ಸೋಷಿಯಲಿಸ್ಟ್ ಪಕ್ಷವನ್ನು ಬಿಟ್ಟು ಪ್ರಧಾನಿ ಇಂದಿರಾ ಗಾಂಧಿಯವರ ಕಾಂಗ್ರೆಸ್ ಆರ್ ಪಕ್ಷವನ್ನು ಸೇರಿಕೊಂಡರು. 1971ರ ಲೋಕಸಭಾ ಚುನಾವಣೆಯನ್ನು ಕಾಂಗ್ರೆಸ್ ಆರ್ ಪಕ್ಷದಿಂದ ನಿಂತು ಮಂಡ್ಯ ಕ್ಷೇತ್ರದಿಂದ ಎರಡನೇ ಬಾರಿ ಗೆದ್ದು ಎಂಪಿ ಸಂಸದರಾದರು. ನಂತರ ವಿಧಾನ ಪರಿಷತ್ತಿನ ಸದಸ್ಯರಾಗಿ ರಾಜ್ಯದ ಅರಸು ಸರ್ಕಾರದಲ್ಲಿ ಮಂತ್ರಿಯಾದರು.
1977ರಲ್ಲಿ ದೇವರಾಜು ಅರಸು ಸರ್ಕಾರದ ಮಹತ್ವಾಕಾಂಕ್ಷೆಯ ವರ್ಣ ಕೆನಾಲ್ ಅಥವಾ ವರ್ಣ ಕಾಲುವೆ ಯೋಜನೆ ವಿರುದ್ಧ ಮಂಡ್ಯ ರೈತರು ಪ್ರತಿಭಟಿಸಿದರು. ಆಸಮಯದಲ್ಲಿ ಅರಸು ಸರ್ಕಾರದಲ್ಲಿ ಮಂತ್ರಿಯಾಗಿದ್ದ ಎಸ್,ಎಂ ಕೃಷ್ಣ ರೈತರಿಗೆ ಬೆಂಬಲವಾಗಿ ನಿಂತು ರಾಜಿನಾಮೆಯನ್ನು ಕೊಟ್ಟರು. ನಂತರ ಅವರು ರಾಜಕೀಯ ಜೀವನದಲ್ಲಿ ಹಿಂತಿರುಗಲಿಲ್ಲ, ದೊಡ್ಡ ಪ್ರಮಾಣದಲ್ಲಿ ಯಶಸ್ಸನ್ನು ಗಳಿಸುತ್ತಾ ಸಾಗಿದರು. ಹಲವು ಬಾರಿ ಸಂಸದರಾದರು, ಶಾಸಕರಾದರು, ಸಚಿವರಾದರು ಮತ್ತು ಸ್ಪೀಕರ್ ಆಗಿ ಕೂಡ ಕೆಲಸವನ್ನು ಮಾಡಿದರು.
ಕೇಂದ್ರದಲ್ಲಿ ಇಂದಿರಾಗಾಂಧಿ ಸರ್ಕಾರದಲ್ಲಿ ನಂತರ ರಾಜೀವ್ ಗಾಂಧಿ ಸರ್ಕಾರದಲ್ಲೂ ಕೂಡ ಕೇಂದ್ರ ಮಂತ್ರಿಯಾಗಿ ಕೆಲಸ ಮಾಡಿದರು. 1989 ರಲ್ಲಿ ರಾಜ್ಯ ರಾಜಕಾರಣಕ್ಕೆ ಹಿಂತಿರುಗಿದರು. ರಾಜ್ಯದಲ್ಲಿ ಮೊದಲ ಬಾರಿ ಉಪ ಮುಖ್ಯಮಂತ್ರಿ ಹುದ್ದೆಯನ್ನು ಸೃಷ್ಠಿಸಿ ಅದರಲ್ಲಿ ಎಸ್.ಎಂ ಕೃಷ್ಣ ಅವರನ್ನು ಕೂರಿಸಲಾಯಿತು. ಈ ಮೂಲಕ ರಾಜ್ಯದ ಮೊದಲ ಡಿಸಿಎಂ ಎಂದು ಕರೆಸಿಕೊಂಡರು. 1994ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿತು, ಮದ್ದೂರಿನಲ್ಲಿ ಡಿಸಿಎಂ ಕೃಷ್ಣ ಕೂಡ ಸೋತರು. ವಿಧಾನಸಭಾ ಎಲೆಕ್ಷನ್‌ನಲ್ಲಿ ಸೋತಿದ್ದ ಕೃಷ್ಣರನ್ನು 1996 ರಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯಸಭೆಗೆ ಕಳಿಸಿತು.
1999ರ ಕರ್ನಾಟಕ ಚುನಾವಣೆಯಲ್ಲಿ 224 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 132 ಕ್ಷೇತ್ರಗಳಲ್ಲಿ ವಿಜಯ ಸಾಧಿಸಿತು, ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಸಿಕ್ಕಿತು. 1999ರ ಕರ್ನಾಟಕ ವಿಧಾನಸಭೆ ಚುನಾವಣೆಗೂ ಮುನ್ನ ಎಸ್.ಎಂ ಕೃಷ್ಣ ಅವರಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ಕೊಡಲಾಗಿತ್ತು ಹೀಗಾಗಿ ಅವರ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ತಕ್ಷಣ ಸಿಎಂ ಕುರ್ಚಿ ಅವರಿಗೆ ಸಿಕ್ಕಿತು. 1999ರ ಅಕ್ಟೋಬರ್ 11 ರಂದು ರಾಜ್ಯದ 16 ನೇ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರು. ಎಸ್.ಎಂ ಕೃಷ್ಣ 1999 ರಿಂದ 2004 ರವರೆಗೆ ಒಟ್ಟಾರೆಯಾಗಿ 4 ವರ್ಷ 230 ದಿನ ಸಿ.ಎಂ ಆಗಿ ಕಾರ್ಯನಿರ್ವಹಿಸಿದ್ದರು. ಸಿಎಂ ಆದ ಎಸ್.ಎಂ ಕೃಷ್ಣ ಅವರ ಮುಂದೆ ಕಾವೇರಿ ನದಿನೀರು ವಿಚಾರ, ಕಾಡುಗಳ್ಳ ವೀರಪ್ಪನ್ ವರನಟ ಡಾ.ರಾಜ್‌ಕುಮಾರ್‌ರನ್ನು ಅಪಹರಿಸಿದ್ದು, ದೇವನಹಳ್ಳಿಯಲ್ಲಿ ಬಾಕಿ ಉಳಿದಿದ್ದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಾಮಗಾರಿ ಹೀಗೆ ಹಲವಾರು ಸವಾಲುಗಳಿದ್ದವು.
ರಾಜ್ಯವನ್ನು ಆಧುನಿಕತೆಯತ್ತ ಕರೆದೊಯ್ಯಲು ಕಂಪ್ಯೂಟರ್ ಮತ್ತು ಇನ್ಪಾರ್ಮೇಷನ್ ಟೆಕ್ನಾಲಜಿಯೇ ನನ್ನ ಎರಡು ಪ್ರಮುಖ ಅಸ್ತ್ರಗಳು ಎಂದು ಹೇಳಿದ್ದರು. ಇದಕ್ಕಾಗಿ ವಿಪ್ರೋ ಮುಖ್ಯಸ್ಥ ಅಜೀಮ್ ಪ್ರೇಮ್‌ಜಿ, ಇನ್ಪೋಸಿಸ್ ಮುಖ್ಯಸ್ಥ ನಾರಾಯಣಮೂರ್ತಿ ಹಾಗೂ ಮೈಕ್ರೋ ಲ್ಯಾಂಡ್‌ನ ಸಂಸ್ಥಾಪಕ ಪ್ರದೀಪ್ ಕರ್ ಮುಂತಾದವರನ್ನು ಜೊತೆಯಲ್ಲಿಟ್ಟುಕೊಂಡರು. ಶಾಲಾ ಪಠ್ಯಕ್ರಮದಲ್ಲಿ ಇನ್ಫಾರ್ಮೇಶನ್ ಟೆಕ್ನಾಲಜಿಯನ್ನು ಸೇರಿಸಲಯಿತು, ಪ್ರತಿ ಹೈಸ್ಕೂಲ್ ನಲ್ಲೂ ಕಂಪ್ಯೂಟರ್ ಲ್ಯಾಬ್ ಮತ್ತು ಇಂಟರ್‌ನೆಟ್ ಕನೆಕ್ಷನ್ ಇರಲೇಬೇಕು ಎನ್ನುವ ಯೋಜನೆಯನ್ನು ಜಾರಿಗೆ ತರಲಾಯಿತು. ಉದ್ಯಾನನಗರಿ ಬೆಂಗಳೂರನ್ನು ಭಾರತದ ಸಿಲಿಕಾನ್ ಸಿಟಿಯನ್ನಾಗಿಸುವುದರ ಹಿಂದೆ ಎಸ್.ಎಂ ಕೃಷ್ಣ ಅವರ ಪಾತ್ರ ತುಂಬಾ ದೊಡ್ಡದಿದೆ. ಇಂದು ಬೆಂಗಳೂರಿನಲ್ಲಿ ತಲೆ ಎತ್ತಿರುವ ದೊಡ್ಡ ದೊಡ್ಡ ಪ್ಲೈಓವರ್‌ಗಳು, ವಿಶ್ವದ ಟೆಕ್ಕಿಗಳನ್ನು ಸೆಳೆಯುತ್ತಿರುವುದು, ಐಟಿ ಪಾರ್ಕ್ ಮುಂತಾದವುಗಳಲ್ಲಿ ಎಸ್.ಎಂ ಕೃಷ್ಣ ಅವರ ಕೊಡುಗೆ ಸಾಕಷ್ಟು ಅಪಾರವಾಗಿದೆ.
2002 ರಲ್ಲಿ ಎಸ್.ಎಂ ಕೃಷ್ಣ ಸರ್ಕಾರ ರಾಜ್ಯದಲ್ಲಿ ಮೊದಲ ಬಾರಿಗೆ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದ ಯೋಜನೆಯನ್ನು ಜಾರಿಗೆ ತಂದಿತು. 2001-2002 ರಲ್ಲಿ ಇಂಡಿಯಾ ಟುಡೇ ಸಂಸ್ಥೆ ನಡೆಸಿದ ಒಪಿನಿಯನ್ ಪೋಲ್‌ನಲ್ಲಿ ಬೆಸ್ಟ್ ಸಿಎಂ ಎಂಧು ಕರೆಸಿಕೊಂಡರು. 2002 ರಲ್ಲಿ ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಡುವಂತೆ ಸುಪ್ರೀಂಕೋರ್ಟ್ ಆದೇಶ ಕೊಟ್ಟಿತ್ತು. ಸ್ವತಃ ಎಸ್.ಎಂ ಕೃಷ್ಣ ಕೋರ್ಟ್ ಆದೇಶವನ್ನು ದಿಕ್ಕರಿಸಿ ಆರು ದಿನಗಳ ಪಾದಯಾತ್ರೆಯನ್ನು ಕೈಗೊಂಡಿದ್ದರು. 2004 ರಲ್ಲಿ ಬೆಂಗಳೂರಿನ ಚಾಮರಾಜಪೇಟೆಯಿಂದ ಕಣಕ್ಕಿಳಿದರು. ಎಸ್.ಎಂ ಕೃಷ್ಣ ಗ್ರಾಮೀಣ ಪ್ರದೇಶಕ್ಕಿಂತ ನಗರ ಪ್ರದೇಶದ ಸಿಎಂ, ನಗರ ಪ್ರದೇಶಗಳಿಗೆ ಹೆಚ್ಚಾಗಿ ಗಮನ ಕೊಡುತ್ತಾರೆ ಎನ್ನು ಮನೋಭಾವದಿಂದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೋಲಾಯಿತು. ಇದೇ ವೇಳೆ 2004ರಲ್ಲಿ ಕೇಂದ್ರದಲ್ಲಿ ವಾಜಪೇಯಿ ಸರ್ಕಾರ ಹೋಗಿ ಯುಪಿಎ ಅರ್ಕಾರ ಅಧಿಕಾರಲ್ಲೆ ಬಂದಿತು, ಈ ಸಮಯದಲ್ಲಿ ಎಸ್.ಎಂ ಕೃಷ್ಣರನ್ನು ಮಹಾರಾಷ್ಟ್ರದ ರಾಜ್ಯಪಾಲರನ್ನಾಗಿ ಮಾಡಿದರು. 2009 ಇವರನ್ನು ಕರ್ನಾಟಕದಿಂದ ರಾಜ್ಯಸಭೆಗೆ ಕಳುಹಿಸಿದರು. ನಂತರ ಯುಪಿಎ 2 ಸರ್ಕಾರದಲ್ಲಿ ಮನಮೋಹನ್ ಸಿಂಗ್ ಅವರ ಸರ್ಕಾರದಲ್ಲಿ ವಿದೇಶಾಂಗ ಮಂತ್ರಿಯನ್ನಾಗಿಯೂ ಮಾಡಲಾಯಿತು. 2011 ರಲ್ಲಿ ಎಸ್.ಎಂ ಕೃಷ್ಣ ರಾಜೀನಾಮೆ ನೀಡಿದರು. 2018ರ ಕರ್ನಾಟಕ ವಿಧಾನಸಭಾ ಚುನಾವಣೆಗೂ ಮುನ್ನ ಅಂದರೆ 2017ರ ಕೊನೆಯಲ್ಲಿ ಬಿಜೆಪಿಗೆ ಸೇರಿ ಎಲ್ಲರನ್ನೂ ಚಕಿತಗೊಳಿಸಿದರು.
ಸುಧೀರ್ಘ ರಾಜಕೀಯ ಜೀವನವನ್ನು ಕಳೆದ ಎಸ್.ಎಂ ಕೃಷ್ಣ ಅವರು ತಮ್ಮ 94ನೇ ವಯಸ್ಸಿನಲ್ಲಿ 10 ಡಿಸೆಂಬರ್, 2024 ರಂದು ಇಹಲೋಕ ತ್ಯಜಿಸಿದರು.
ಹೇಮ ಎನ್.ಜೆ
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿನಿ