Alma Corner

ಬೆಸ್ಕಾಂ ಕಚೇರಿಗಳಲ್ಲಿ ಅಕ್ರಮಗಳ ಮಹಾಪೂರ…45 ಕಚೆರಿಗಳಲ್ಲಿ ಶೋಧಕಾರ್ಯ…!

ರಾಜಧಾನಿಯಲ್ಲಿ ಬೆಸ್ಕಾಂ ಹಾಗೂ ಜಲಮಂಡಳಿ ಕಛೇರಿಗಳ ಅಧಿಕಾರಿಗಳ ಬಳಿ ಲಕ್ಷಾಂತರ ರೂಪಾಯಿ ಹಣ, ಖಾಸಗಿ ಏಜೆಂಟರ್‌ಗಳ ಬಳಿ ಸರ್ಕಾರದ ಕಡತಗಳ ನಿರ್ವಹಣೆ ಮತ್ತು ಎಇಇ ಗೂಗಲ್‌ ಮುಖಾಂತರ 12 ಲಕ್ಷ ರೂ. ವರ್ಗಾವಣೆ ಸೇರಿದಂತೆಹಲವು ಅಕ್ರಮಗಳು ಡಿ.19 ರಂದು ಬಯಲಾಗಿವೆ.
ಲೋಕಾಯುಕ್ತ ನ್ಯಾಯಾಂಗ ಅಧಿಕಾರಿಗಳು ಹಾಗೂ ಪೊಲೀಸ್‌ ಅಧಿಕಾರಿಗಳು ಜಂಟಿಯಾಗಿ ಜಲಮಂಡಳಿ ಹಾಗೂ ಬೆಸ್ಕಾಂನ 45 ಕಚೇರಿಗಳ ಮೇಲೆ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಅಕ್ರಮಗಳ ಸರಮಾಲೆಯೇ ತೆರೆದುಕೊಂಡಿದೆ. ಅಧಿಕಾರಿಗಳ ಕರ್ತವ್ಯಲೋಪ, ಅಧಿಕಾರಿಗಳ ಬಳಿ ಇದ್ದ ಕಂತೆ ಕಂತೆ ಹಣ, ಖಾಸಗಿ ವ್ಯಕ್ತಿಗಳ ದರ್ಬಾರನ್ನು ಕಂಡು ಲೋಕಾಯುಕ್ತ ಅಧಿಕಾರಿಗಳು ದಂಗಾಗಿದ್ದಾರೆ.
ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್‌ ನೇತೃತ್ವದ ತಂಡ ಯಲಹಂಕ ಸ್ಯಾಟಲೈಟ್‌ನ ಬೆಸ್ಕಾಂ ಕಚೇರಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ಮಾಡಿತು. ಈ ವ್ಯಾಪ್ತಿಯಲ್ಲಿ ಸುಮಾರು 1.18 ಕೋಟಿ ರೂ. ಬಿಲ್‌ ಪಾವತಿ ಕಟ್ಟಿಸಿಕೊಳ್ಳದೆ ಬಾಕಿ ಉಳಿಸಿಕೊಂಡಿರುವ ಅಧಿಕಾರಿಗಳ ನಿರ್ಲಕ್ಷ್ಯ ಬೆಳಕಿಗೆ ಬಂದಿದೆ. ಜೊತೆಗೆ ಹಾಜರಾತಿಯನ್ನೂ ಸರಿಯಾಗಿ ಪಾಲಿಸದೇ ಅರ್ಧಕ್ಕೂ ಹೆಚ್ಚು ಬೆಸ್ಕಾಂ ನೌಕರರು ಗೈರಾಗಿರುವುದು ಕಂಡುಬಂದಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದರು.


ಉಪಲೋಕಾಯುಕ್ತ ನ್ಯಾ.ಬಿ.ವೀರಪ್ಪ ನೇತೃತ್ವದ ತಂಡ ಎಂ.ಜಿ ರಸ್ತೆ ಮತ್ತು ಇಂದಿರಾನಗರದಲ್ಲಿರುವ ಬೆಸ್ಕಾಂ ಹಾಗೂ ಜಲಮಂಡಳಿ ಕಚೇರಿಗಳಲ್ಲಿ ಶೋಧಕಾರ್ಯ ನಡೆಸಿದರು. ಈ ವೇಳೆ ಜಲಮಂಡಳಿ ಎಇಇ ಜಿಯಾ ಉಲ್ಲಾ ಷರೀಫ್‌, ತಮ್ಮ ಗೂಗಲ್‌-ಪೇ ಖಾತೆಯಿಂದ ಒಂದೇ ವ್ಯಕ್ತಿಗೆ 12 ಲಕ್ಷಕ್ಕೂ ಅಧಿಕ ಹಣ ವರ್ಗಾವಣೆಯಾಗಿರುವುದು ಕಂಡುಬಂದಿದೆ. ಯಾವ ಉದ್ದೇಶಕ್ಕಾಗಿ ಈ ಹಣದ ವಹಿವಾಟು ನಡೆದಿದೆ ಎನ್ನುವುದಕ್ಕೆ ಸ್ಪಷ್ಟ ಉತ್ತರ ನೀಡುವುಲ್ಲಿ ವಿಫಲರಾಗಿದ್ದಾರೆ. ಅಷ್ಟೇ ಅಲ್ಲದೇ, ಚಿದಾನಂದ ಎಂಬುವವರ ಬಳಿ ಅನಧಿಕೃತವಾಗಿ ಇದ್ದ 1.86 ಲಕ್ಷ ರೂ. ನಗದು ಪತ್ತೆಯಾಗಿದೆ. ಅದೇ ರೀತಿ ಶ್ರೀನಿವಾಸ್‌ ಬಳಿ 15 ಸಾವಿರ ರೂ. ವಿಶ್ವನಾಥ್‌ ಎಂಬ ಅಧಿಕಾರಿಯ ಬಳಿ 32 ಸಾವಿರ ರೂ. ಹಣ ಹೆಚ್ಚುವರಿಯಾಗಿ ಪತ್ತೆಯಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.
ʼಜಲಮಂಡಳಿ ಮತ್ತು ಬೆಸ್ಕಾಂ ಅಧಿಕಾರಿಗಳ ಪರವಾಗಿ ಕೆಲವು ಎಂಟರ್‌ಪ್ರೈಸಸ್‌ ಕಂಪನಿಗಳಿಗೆ ಡಿಜಿಟಲ್‌ ಪೀಮೆಂಟ್‌ ಮೂಲಕ ಹಣ ಪಾವತಿಯಾಗಿದೆ. ಯಾವ ಉದ್ದೇಶಕ್ಕೆ ಈ ಹಣ ವರ್ಗಾವಣೆಯಾಗಿದೆ ಎಂದು ಗೊತ್ತಾಗಬೇಕಿದೆ. ಹೀಗಾಗಿ ಜಿಯಾ ಉಲ್ಲಾ ಷರೀಫ್‌ ಸೇರಿ ಹಲವು ಅಧಿಕಾರಿಗಳ ಬ್ಯಾಂಕ್‌ ಖಾತೆಗಳ ಡಿಜಿಟಲ್‌ ಪೇಮೆಂಟ್‌ ವಿವರ ಪಡೆಯುವಂತೆ ಸೂಚಿಸಲಾಗಿದೆ. ತಡರಾತ್ರಿವರೆಗೂ ಶೋಧ ಕಾರ್ಯ ನಡೆಸಿ ಕಡತಗಳನ್ನು ಜಪ್ತಿ ಮಾಡಲಾಗಿದೆ. ಸರ್ಕಾರದ ಕಡತಗಳನ್ನು ಖಾಸಗಿ ವ್ಯಕ್ತಿ ಇಟ್ಟುಕೊಳ್ಳುವುದು ಕಾನೂನು ಬಾಹಿರ. ಈ ನಿಟ್ಟಿನಲ್ಲಿ ಕಡತಗಳನ್ನು ಕೊಟ್ಟ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆʼ ಎಂದು ನ್ಯಾ.ಬೀರಪ್ಪ ಹೇಳಿದರು.
ಉಪಲೋಕಾಯುಕ್ತ ಕೆ.ಎನ್‌. ಫಣೀಂದ್ರ ನೇತೃತ್ವದ ತಂಡ ಮಲ್ಲೇಶ್ವರಂ ಹಾಗೂ ಆನಂದರಾವ್‌ ವೃತ್ತದಲ್ಲಿರುವ ಕಚೆರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ʼದಾಳಿಗೆ ಸಂಬಂದಿಸಿದ ಎಲ್ಲಾ ಅಧಿಕಾರಿಗಳಿಂದ ವರದಿ ಪಡೆದುಕೊಂಡು ಬಳಿಕ ವಿಚಾರಣೆಯ ಸಲುವಾಗಿ ಇಲಾಖೆಯ ಕಾರ್ಯದರ್ಶಿಗಳನ್ನು ಪ್ರತಿವಾದಿಗಳನ್ನಾಗಿ ಮಾಡಿ ನೋಟೀಸ್‌ ನೀಡಲಾಗುವುದುʼ ಎಂದು ಲೋಕಾಯುಕ್ತ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹೇಮ ಎನ್‌.ಜೆ

ಆಲ್ಮಾ ಮೀಡಿಯಾ ಸ್ಕೂಲ್‌ ವಿದ್ಯಾರ್ಥಿನಿ

Show More

Leave a Reply

Your email address will not be published. Required fields are marked *

Related Articles

Back to top button