ಸವಾಲುಗಳಿಗೆ ಸೋಲದ ಸುನಿತಾ..!
ಹತ್ತನೇ ತರಗತಿಯನ್ನು ಮುಗಿಸಿದ್ದ ಆ ಹುಡುಗಿ ಕಾಲೇಜು ಮೆಟ್ಟಿಲೇರುವ ತವಕದಲ್ಲಿದ್ದಳು. ಸ್ಕೂಲ್ ಡ್ರೇಸ್ ಹಾಕಿಕೊಳ್ಳುವುದು ಮುಗಿಯಿತು ಇನ್ನೇನಿದ್ದರು ಬಣ್ಣಬಣ್ಣದ ಬಟ್ಟೆ ಹಾಕಿಕೊಂಡು ಕಾಲೇಜಿಗೆ ತೆರಳಬಹುದು ಎಂಬ ಲೆಕ್ಕಾಚಾರದಲ್ಲಿ ಆಕೆಯ ಮುಖದಲ್ಲಿ ಸಂತೋಷವೆಂಬುದು ಕಳೆಗಟ್ಟಿತ್ತು. ಅಂತೆಯೆ ಸ್ಥಳೀಯ ಕಾಲೇಜೋಂದರ ವಿಜ್ಞಾನ ವಿಭಾಗದಲ್ಲಿ ಪ್ರಥಮ ಪಿಯುಸಿ ಗೆ ಪ್ರವೇಶ ಪಡೆದು ಪ್ರತಿನಿತ್ಯ ಉತ್ಸಾಹದಲ್ಲೆ ಕಾಲೇಜಿಗೆ ಹೋಗಿ ಬರುತ್ತಿದ್ದಳು. ಆದರೆ ಕರಾಳ ದಿನವೊಂದು ಹಸಿದ ಹೆಬ್ಬುಲಿಯಂತೆ ತನಗಾಗಿ ಕಾಯುತ್ತಿರುವುದು ಅವಳಿಗರಿವಿರಲಿಲ್ಲ. ಎಂದಿನಂತೆ ಕಾಲೇಜು ಮುಗಿಸಿಕೊಂಡು ಮರಳಿ ಬರುತ್ತಿರುವಾಗ ಎಂಟು ಜನರ ಗುಂಪೊಂದು ಆಕೆಯ ಮೇಲೆ ದಾಳಿ ಮಾಡಿ ಬಲತ್ಕಾರವೆಸಗಿತು. ಆಕ್ರಮಣಕ್ಕೆ ಒಳಗಾಗಿ ಮಾಂಸದ ಮುದ್ದೆಯಂತೆ ಬಿದ್ದಿದ್ದ ಆಕೆಯನ್ನು ಎತ್ತಿಕೊಂಡು ಮನೆಗೆ ಬಂದ ತಂದೆಗೆ ಎಲ್ಲಿಲ್ಲದ ಸಂಕಟ. ತಮ್ಮ ಮುಂದೆಯೇ ಮಗಳಿಗೆ ಆದಂತಹ ಈ ಕೃತ್ಯವನ್ನು ನೋಡಿ ಆಕಾಶವೇ ತಲೆಯ ಮೇಲೆ ಬಿದ್ದಂತಾಗಿತ್ತು ಆ ಪೋಷಕರಿಗೆ. ದೇವರಿಗೆ ಹಿಡಿ ಶಾಪವನ್ನು ಹಾಕಿದರು. ಕೈ ಹಿಡಿದು ಆಡಿಸಿ ಬೆಳೆಸಿದ ಆ ತಂದೆ ಏನು ಮಾತನಾಡದೆ ಮಗಳ ಸ್ಥಿತಿ ಕಂಡು ಮರುಗುತ್ತಾ ನಿಂತರು.
ಹಾಗೇ ದಿನಗಳು ಕಳೆದವು. ಮಗಳಿಗೆ ಆ ತಂದೆ ಪ್ರತಿನಿತ್ಯ ಧೈರ್ಯತುಂಬುತ್ತಿದ್ದರು. ಆದರೆ ಆಕೆ ದಿನನಿತ್ಯ ಮನೆಯ ಕಿಟಕಿಯಾಚೆ ನೋಡುತ್ತಾ ಒಂಟಿಯಾಗಿ ಕುಳಿತುಬಿಡುತ್ತಿದ್ದಳು. ಮಾತನಾಡಿಸಲು ಬಂದ ಸಂಬಂಧಿಕರಿಗೂ ಮುಜುಗರ ತಳಮಳ ಆಗುತ್ತಿತ್ತು. ಕಾರಣ ಈ ಮನೆತನದೊಂದಿಗೆ ಸಂಬಂಧವನ್ನು ಬೆಳೆಸಿದರೆ ಮಾನ ಮರ್ಯಾದೆಗೂ ಕುಂದು ಬರಬಹುದು ಎಂಬ ಅವರ ಆಲೋಚನೆ. ಇನ್ನು ಕೆಲವರಂತು ಅವಳೊಟ್ಟಿಗೆ ಏನು ಮಾತನಾಡಬೇಕೆಂಬುದೆ ತಿಳಿಯುತ್ತಿರಲಿಲ್ಲ. ಹೀಗೆಯೆ ಎರಡು ವರ್ಷ ಕಳೆದ ನಂತರ ಮನೆಯವರೊಟ್ಟಿಗೆ ಸ್ವಲ್ಪ ಮಾತನಾಡುವ ಹಂತಕ್ಕೆ ಬಂದಳು. ತನ್ನಲ್ಲಿಯೆ ಧೈರ್ಯವನ್ನು ತುಂಬಿಕೊಳ್ಳಲು ಶುರುಮಾಡಿದಳು. ಸಮಾಜವನ್ನು ಗಟ್ಟಿತನದಿಂದ ಎದುರಿಸಲು ಪ್ರಾರಂಭಿಸಿದಳು.
ಪುನಃ ಕಾಲೇಜಿಗೆ ಹೋಗಲು ಸಿದ್ದವಾದಳು. ಅದಕ್ಕೊಸ್ಕರ ಅವರ ತಂದೆ ಆಕೆಗೆ ಸ್ವಲ್ಪ ಹಣ ನೀಡಿ ಕಾಲೇಜಿಗೆ ಕಳುಹಿಸಿದರು. ಆಕೆಯ ಹೆಸರು ಸವಿತಾ ಕೃಷ್ಣನ್. ಮರುಪ್ರವೇಶಕ್ಕೆಂದು ಕಾಲೇಜಿಗೆ ಉತ್ಸುಕತೆಯಿಂದ ತೆರಳಿದ ಅವಳಿಗೆ ಅಲ್ಲಿ ಪ್ರವೇಶ ಸಿಗಲಿಲ್ಲ. ಕಾರಣ ಮರು ಪ್ರವೇಶ ನೀಡಿದರೆ ಕಾಲೇಜಿನ ಪರಿಸರ ಕೆಟ್ಟು ಹೋಗುತ್ತದೆ ಎಂಬುದು ಅಲ್ಲಿನ ಬಲ್ಲವರ ಯೋಚನೆಯಾಗಿತ್ತು. ಇದರಿಂದ ಸುಮ್ಮನಿರದ ಸುನೀತಾ ಅಕ್ಕಪಕ್ಕದ ಊರಿನ ಕಾಲೇಜುಗಳಿಗೆ ತೆರಳಿದರು. ಆಕೆಯ ಕಥೆಯನ್ನು ಆಲಿಸಿದ ಕಾಲೇಜು ಮಂಡಳಿಗಳು ಪ್ರವೇಶ ಕಲ್ಪಿಸಿಕೊಡಲಿಲ್ಲ. ಇದರಿಂದ ಸುನೀತಾ ಬೇಸತ್ತು “ಯಾರೆಲ್ಲಾ ನನ್ನಂತೆ ಇದ್ದಾರೋ, ಯಾವೆಲ್ಲಾ ಹೆಣ್ಣು ಮಕ್ಕಳನ್ನು ವೇಶ್ಯವಾಟಿಕೆಗೆ ತಳ್ಳಲಾಗುತ್ತಿದೆಯೋ,ಯಾವೆಲ್ಲಾ ಹೆಣ್ಣು ಮಕ್ಕಳು ಬೀದಿಗೆ ಬಿದ್ದಿದ್ದಾರೊ ಅಂತವರಿಗಾಗಿ ನಾನು ಬದುಕುತ್ತೆನೆ” ಎಂದು ನಿರ್ಧಾರವನ್ನು ಮಾಡಿ ಪ್ರಜ್ವಲ ಎನ್ನುವ ತಮ್ಮದೆ ಆದಂತಹ ಸಂಸ್ಥೆಯೊಂದನ್ನು ಆರಂಭಿಸಿದರು.
ಸುನೀತಾರದ್ದು ಎಂಥ ಗಟ್ಟಿ ನಿರ್ಧಾರ ಎಂಬುದನ್ನು ಒಮ್ಮೆ ಹಾಗೇ ಅವಲೋಕಿಸಿದರೆ ಸ್ವತಃ ಅವರಿಗೇ ಯಾವ ಕಾಲೇಜಿನಲ್ಲಿ ಕಾಲಿಡಲು ಬಿಡಲಿಲ್ಲ, ಏನಾದರು ಕೆಲಸ ಮಾಡೋಣ ವೆಂದರೆ ಅವಕಾಶ ನೀಡಲು ಯಾರು ಸಿದ್ದರಿರಲಿಲ್ಲ. ಒಟ್ಟಾರೆ ಹೇಳುವುದಾದರೆ ಅವರ ಜೀವನವೇ ಒಂದರ್ಥದಲ್ಲಿ ಅವರಿಗೆ ಹೊರೆಯಾಗಿತ್ತು. ಅಂಥ ವಿಷಮ ಪರಿಸ್ಥಿತಿಯಲ್ಲಿಯೂ ಈ ರೀತಿಯ ನಿರ್ಧಾರ ತೆಗೆದುಕೊಳ್ಳುವುದೆಂದರೆ ಸುಲಭದ ಮಾತಲ್ಲ. ಹೀಗೆ ನಿರ್ಧರಿಸಿ ಸುಮ್ಮನೆ ಕೂರದ ಸುನೀತಾ 19 ನೇ ವಯಸ್ಸಿನಲ್ಲಿ ಕೇವಲ ಎರಡು ಮಕ್ಕಳೊಂದಿಗೆ ತಮ್ಮ ಕನಸಿನ ಪ್ರಜ್ವಲ ಸಂಸ್ಥೆಯನ್ನು ಹೈದರಾಬಾದ್‌ನಲ್ಲಿ ಆರಂಭಿಸಿದರು. ಅಂದು ಪ್ರಾರಂಭವಾದ ಈ ಸಂಸ್ಥೆಯಲ್ಲಿಂದು 10000ಕ್ಕಿಂತಲು ಹೆಚ್ಚು ಮಕ್ಕಳನ್ನು ಅವರು ಸಾಕಿ ಬೆಳೆಸಿದ್ದಾರೆ. ಮಕ್ಕಳಿಗೆಲ್ಲ ಉತ್ತಮ ಶಿಕ್ಷಣ ಮತ್ತು ಸಂಸ್ಕಾರವನ್ನು ನೀಡಿದ್ದಾರೆ. ಹೀಗೋಮ್ಮೆ ಅಲ್ಲಿನ ಕೆಲ ಮಕ್ಕಳು ಕಾಲೇಜಿಗೆ ಪ್ರವೇಶ ಕೋರಿ ಹೋಗಿದ್ದ ಸಂಧರ್ಬದಲ್ಲಿ ಇವರೆಲ್ಲ ವೇಶ್ಯವಾಟಿಕೆಯಿಂದ ಬಂದ ಮಕ್ಕಳು ಇಂಥವರಿಗೆ ಪ್ರವೇಶ ಕೊಟ್ಟರೆ ಕಾಲೇಜಿನ ಹೆಸರು ಹಾಳಾಗುತ್ತದೆ ಎಂಬ ನೆಪವೊಡ್ಡಿ ಪ್ರವೇಶವನ್ನು ನಿರಾಕರಿಸಿದರು.
ಅದನ್ನು ಸವಾಲಾಗಿ ತೆಗೆದುಕೊಂಡ ಸುನೀತಾ ಆ ಮಕ್ಕಳಿಗೋಸ್ಕರ ಸ್ವಂತ ಶಾಲಾ-ಕಾಲೇಜುಗಳನ್ನು ಸ್ಥಾಪಿಸಿದರು. ಇವತ್ತು ಅವುಗಳ ಸಂಖೈ18 ಆಗಿದೆ. ಆ ಎಲ್ಲಾ ಮಹಿಳೆಯರಿಗೆ ಉದ್ಯೋಗವಕಾಶ ನೀಡಲೆಂದು ಕೆಲವೊಂದು ಕಂಪನಿ, ಉದ್ಯಮಗಳನ್ನು ಅವರೆ ಸ್ಥಾಪಿಸಿದರು. ತಮಗೇ ಆಶ್ರಯವಿಲ್ಲದಾಗಿದ್ದ ಅವರು ಹತ್ತಾರು ಸಾವಿರ ಮಕ್ಕಳಿಗೆ ಆಸರೆಯಾಗಿ ಅವರ ಬಾಳಲ್ಲಿ ಬದಲಾವಣೆ ತಂದಿದ್ದಾರೆ. ಅವರ ಈ ಸಾಧನೆಗೆ ಭಾರತ ಸರ್ಕಾರ 2016 ರಲ್ಲಿ ಪದ್ಮಶ್ರಿ ಪುರಸ್ಕಾರ ನೀಡಿ ಗೌರವಿಸಿತು. ಹಿಂದೊಮ್ಮೆ ತಮ್ಮ ಬದುಕಿನಲ್ಲಾದ ಘನಘೋರ ಆಘಾತದಿಂದ ಅಕ್ಷರಶಃ ಮಾಂಸದ ಮುದ್ದೆಯಾಗಿ ರಸ್ತೆಯಲ್ಲಿ ಬಿದ್ದಿದ್ದ ಸುನೀತಾ ಕೃಷ್ಣನ್ ಪದ್ಮಶ್ರಿ ಪ್ರಶಸ್ತಿ ಪಡೆದಿದ್ದಕ್ಕೆ ಕಾರಣ ಅವರಲ್ಲಿದ್ದ ಆ ಛಲ ಹಾಗೂ ಮಾನವೀಯತೆಗಳು ಮಾತ್ರ.
ಈ ನೆಲದಿ ಹುಟ್ಟುವರು ,ನೂರಾರು ದಿಟ್ಟೆಯರು
ಹರಿದು ಬಂಧನದ ಹುರಿ,ಮುಗಿಲ ಮುಟ್ಟುವರು
ಬಿಡುಗಡೆಯ ಹಾದಿಯಲಿ, ರೆಕ್ಕೆ ಬಿಚ್ಚುವರು
ವಿಧಿ ಬರೆದ ಬರಹವನು ಅಳಿಸಿ ಮೆರೆಯುವರು
ತಮ್ಮ ಭವಿಷ್ಯವನ್ನ ತಾವೇ ಬರೆವುವರು.
ಈ ಸಾಲುಗಳಿಗೆ ಜೀವಂತ ಉದಾಹರಣೆಯಂತಿದ್ದಾರೆ ಪದ್ಮಶ್ರಿ ಪುರಸ್ಕೃತೆ ಸುನೀತಾ ಕೃಷ್ಣನ್.
ಮೇಘಾ ಜಗದೀಶ್
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿನಿ