ಆಡಳಿತ ಮಂಡಳಿ ಯಡವಟ್ಟಿನಿಂದ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ…!
ಆಡಳಿತ ಮಂಡಳಿಯ ಯಡವಟ್ಟಿನಿಂದ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಆಪ್ತ ಸ್ನೇಹಿತ ಕಾಂಗ್ರೆಸ್ ಮುಖಂಡ ವಿಶ್ವನಾಥ್ ಒಡೆತನದ ಶ್ರೀರಂಗಪಟ್ಟಣ ತಾಲ್ಲೂಕಿನ ಕಿರಂಗೂರು ಗ್ರಾಮದ ಬಳಿ ಇರುವ ಕೇಂಬ್ರಿಡ್ಜ್ ಶಾಲೆ ಮತ್ತು ಕಾಲೇಜು ಸಾಲ ಮರುಪಾವತಿ ಮಾಡಿರದ ಕಾರಣ, ಪೂರ್ತಿ ಶಾಲೆ ಮತ್ತು ಕಾಲೇಜಿನ ಕಟ್ಟಡವನ್ನು ಬೆಂಗಳೂರಿನ ವಿಶ್ವೇಶ್ವರಯ್ಯ ಕೋ-ಆಪರೇಟಿವ್ ಬ್ಯಾಂಕ್ ವಶಪಡಿಸಿಕೊಂಡಿದೆ. ಹೀಗಾಗಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ಕೇಂಬ್ರಿಡ್ಜ್ ಶಾಲೆ ಮತ್ತು ಕಾಲೀಜಿನಲ್ಲಿ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಶಾಲಾ-ಕಾಲೇಜಿನಲ್ಲಿ LKG ಯಿಂದ ಹಿಡಿದು PUC ವರೆಗೆ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, PU ಕಾಲೇಜಿನ ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆ ಕೂಡ ಇದೆ.
ಆಡಳಿತ ಮಂಡಳಿ 2017 ರಲ್ಲಿ ಕಟ್ಟಡ ನಿರ್ಮಾಣಕ್ಕೋಸ್ಕರ ಬೆಂಗಳೂರಿನ ವಿಶ್ವೇಶ್ವರಯ್ಯ ಕೋ-ಆಪರೇಟಿವ್ ಬ್ಯಾಂಕ್‌ನಿಂದ ಕೋಟ್ಯಾಂತರ ರೂ ಸಾಲವನ್ನು ಪಡೆದುಕೊಂಡಿತ್ತು. ಆದರೆ ಸಾಲವನ್ನು ಮರುಪಾವತಿ ಮಾಡದ ಕಾರಣ, ಒಂದು ವಾರದ ಹಿಂದೆ ಬ್ಯಾಂಕ್‌ನ ಸಿಬ್ಬಂದಿ ಶಾಲಾ-ಕಾಲೇಜಿನ ಬಳಿ ಬಂದು ಕಟ್ಟಡವನ್ನು ವಶಪಡಿಸಿಕೊಂಡಿದ್ದಾರೆ. ಹೀಗಾಗಿ ಸಾವಿರಾರು ವಿದ್ಯಾರ್ಥಿಗಳು ಒಂದು ವಾರದಿಂದ ಶಾಲಾ-ಕಾಲೇಜುಗಳಿಗೆ ಬರುತ್ತಿಲ್ಲ. ಅದರಲ್ಲೂ ಮುಖ್ಯವಾಗಿ SSLC ಮತ್ತು PUC ವಿದ್ಯಾರ್ಥಿಗಳ ಪರೀಕ್ಷೆಗಳು ಸಮೀಪಿಸುತ್ತಿರುವುದರಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಾಕಷ್ಟು ತೊಂದರೆ ಆಗುತ್ತಿದೆ. ಇನ್ನೇನು 2 ರಿಂದ 3 ತಿಂಗಳಿನಲ್ಲಿ ಪರೀಕ್ಷೆಗಳು ಇರುವ ಹಿನ್ನೆಲೆ ಪಠ್ಯವನ್ನು ಪೂರ್ಣಗೊಳಿಸುವುದು ತಂಬಾ ಮುಖ್ಯವಾಗಿದೆ.
ನಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಾಲವನ್ನು ಮಾಡಿ ಲಕ್ಷಾಂತರ ರೂಗಳ ಶುಲ್ಕವನ್ನು ಪಾವತಿ ಮಾಡಿದ್ದೇವೆ. ತರಗತಿಗಳು ನಡೆಯುತ್ತಿರುವ ವೇಳೆ ಪೋಲೀಸ್ ಇಲಾಖೆಯವರು ಮತ್ತು ಬ್ಯಾಂಕ್‌ನವರು ಕೋರ್ಟ್ ಮುಖಾಂತರ ಬಂದು ಮಕ್ಕಳನ್ನು ಶಾಲೆಯಿಂದ ಹೊರಗೆ ಕಳುಹಿಸಿರುವುದು ಸಾಮಾಜಿಕವಾಗಿ ತಲೆ ತಗ್ಗಿಸುವ ವಿಚಾರ, ವಿಶ್ವನಾಥ್ ಅವರು ಮಕ್ಕಳ ಭವಿಷ್ಯದ ಜೊತೆಗೆ ಆಟವಾಡುತ್ತಿದ್ದಾರೆ. ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದವರು ಇದರ ಬಗ್ಗೆ ತನಿಖೆ ನಡೆಸಬೇಕು ಎಂದು ಪೋಷಕರು ಆಕ್ರೋಷ ಹೊರಹಾಕಿದ್ದಾರೆ.
ಹೇಮ ಎನ್.ಜೆ
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿನಿ