ತಂಬುಳಿ’ ಮೀಟಿದವ..!
ಒಂದು ಮಾತಿದೆ ಊಟದಲ್ಲಿ ಉಪ್ಪಿನಕಾಯಿ ಇಲ್ಲದಿದ್ದರೆ ಆ ಊಟ ಅಪೂರ್ಣ ಎಂದು. ಆದರೆ ಉತ್ತರ ಕನ್ನಡ ಭಾಗದವರಿಗೆ ಉಪ್ಪಿನಕಾಯಿ ಜೊತೆಯಲ್ಲಿ ತಂಬುಳಿ ಇದ್ದರೆ ಮಾತ್ರ ಊಟ ಪರಿಪೂರ್ಣವಾಗುತ್ತದೆ ಎಂಬ ಮನೋಭಾವವಿದೆ.
ತಂಬುಳಿಯಲ್ಲಿ ನಾನಾ ವೈವಿಧ್ಯತೆ ಇದೆ. ಕುಡಿಯೋಕೆ ಅಂತಾನೆ ಒಂದು ರೀತಿಯ ತಂಬುಳಿ ಇದ್ದರೆ,ಊಟಕ್ಕೆ ಅಂತಾನೆ ಬೇರೆ ರೀತಿ ತಂಬುಳಿ ಇದೆ. ಕುಡಿಯಲೆಂದೇ ಇರುವ ತಂಬುಳಿ ಸಾಮಾನ್ಯವಾಗಿ ಸ್ವಲ್ಪ ಸಿಹಿಯಾಗಿರುತ್ತದೆ. ಅಷ್ಟೊಂದು ಖಾರವಾಗಿಯೂ, ಹುಳಿ ಯಾಗಿಯೂ ಇರುವುದಿಲ್ಲ.ಉದಾಹರಣೆ ಒಂದೆಲಗ, ಮೂಗೆಕಾಯಿ ತಿರುಳಿನಿಂದ ಮಾಡಿದಂತಹ ತಂಬುಳಿ. ಸಾಮಾನ್ಯವಾಗಿ ಮದುವೆ ಮುಂಜಿ ಕಾರ್ಯಕ್ರಮಗಳಲ್ಲಿ ತಂಬುಳಿಗಳು ಇದ್ದೇ ಇರುತ್ತವೆ.
ಕುಡಿಯುವ ತಂಬುಳಿಯನ್ನು ಕುಡಿಯುವ ಮಜ್ಜಿಗೆ ಹುಲ್ಲಿನಿಂದಲೂ ತಯಾರಿಸುತ್ತಾರೆ. ಇನ್ನು ಅನ್ನದ ಜೊತೆಗಂತೂ ಸಾಕಷ್ಟು ತಂಬುಳಿಗಳಿವೆ ಶುಂಠಿ, ಜೀರಿಗೆ,ಕೊತ್ತಂಬರಿ, ಮೆಂತ್ಯ ಪೇರಲೆ ಕುಡಿ, ಪತ್ರೆ ಕುಡಿ ಸಂಬಾರ ಸೊಪ್ಪು, ತೊಂಡೆ ಸೊಪ್ಪು, ಜುಮ್ಮನ ಕಾಯಿ,ಮೋಸಂಬಿ ಹಣ್ಣಿನ ಸಿಪ್ಪೆ ಹೀಗೆ ಇನ್ನೂ ಹಲವಾರು ವಿಧಗಳಿವೆ ತಂಬುಳಿಯಲ್ಲಿ.ತಂಬುಳಿ ಇಲ್ಲದ ಊಟದ ದಿನಗಳೇ ಇಲ್ಲ ಅಂತಲೇ ಹೇಳಬಹುದು ಒಂದಲ್ಲ ಒಂದು ಬಗೆಯ ತಂಬುಳಿ ದಿನನಿತ್ಯ ಇರಲೇಬೇಕು. ತಂಬುಳಿ ಇಲ್ಲದ ಊಟ ಅಪೂರ್ಣವೇ ಸರಿ.ಎಷ್ಟೇ ವಿಶೇಷ ಅಡುಗೆಗಳನ್ನು ಮಾಡಿದರು ತಂಬುಳಿ ಇಲ್ಲದ ಊಟ ಕಾಣಸಿಗುವುದು ತೀರಾ ಅಪರೂಪ
ಉತ್ತರ ಕನ್ನಡ ಭಾಗದಲ್ಲಿ ಹೆಚ್ಚಾಗಿ ಮಾವಿನಕಾಯಿ ತಂಬುಳಿಯನ್ನು ವಿಶೇಷವಾಗಿ ಮಾಡುತ್ತಾರೆ. ಮಾವಿನಕಾಯಿಯನ್ನು ಬೇಯಿಸಿಕೊಂಡು ಅದರ ಸಿಪ್ಪೆಯನ್ನ ತೆಗೆದು ತಿರುಳನ್ನು ಮಾತ್ರ ಇಟ್ಟುಕೊಂಡು, ಕಾದ ಬಾಣಲೆಗೆ ಸ್ವಲ್ಪ ತೆಂಗಿನ ಎಣ್ಣೆಯನ್ನ ಹಾಕಿ ಅದಕ್ಕೆ ಸಾಸಿವೆ, ಜೀರಿಗೆ, ಕರಿಬೇವಿನ ಜೊತೆಗೆ ಬೇಯಿಸಿದ ಮಾವಿನ ಕಾಯಿಯ ತಿರುಳನ್ನು ಹಾಕಿ ಅದಕ್ಕೆ ಉಪ್ಪು,ಹುಳಿ, ಸ್ವಲ್ಪ ಬೆಲ್ಲವನ್ನು ಹಾಕಿ ಬೇಯಿಸಿದರೆ ಮಾವಿನಕಾಯಿ ಗೊಜ್ಜು ತಯಾರಾಗುತ್ತದೆ. ಹಾಗೇ ಅತಿ ಸುಲಭವಾಗಿ ಮತ್ತು ಕಡಿಮೆ ಖರ್ಚಿನಲ್ಲಿ ಮಾಡಬಹುದಾದಂತಹ ಇನ್ನೋಂದು ತಂಬುಳಿ ಎಂದರೆ ಅದು ಒಂದೆಲಗದ ತಂಬುಳಿ. ಇದು ಅತ್ಯಂತ ಸುಲಭವಾಗಿ ಮಾಡುವಂತದ್ದಾಗಿದೆ. ಮನೆಯ ಅಂಗಳದಲ್ಲಿ ಸಿಗುವಂತಹ ಸೊಪ್ಪು ಆಗಿರುವುದರಿಂದ ಅಡಿಗೆಗೆ ಏನು ಇಲ್ಲದ ಸಂದರ್ಭದಲ್ಲಿ ಮನೆಯಂಗಳದಲ್ಲೇ ಇರುವಂತಹ ಒಂದೆಲಗವನ್ನು ಬಳಸಿ ಊಟವನ್ನು ಮಾಡಬಹುದಾಗಿದೆ. ಈ ತಂಬುಳಿಯನ್ನು ಮಾಡಲು ಬಹಳ ಕಷ್ಟ ಪಡಬೇಕಾಗಿಲ್ಲ. ಒಂದೆಲಗದ ಸೊಪ್ಪನ್ನು ಚೆನ್ನಾಗಿ ತೊಳೆದು ಅದನ್ನ ಸ್ವಲ್ಪ ಎಣ್ಣೆಯಲ್ಲಿ ಹುರಿದು, ಹುರಿದ ಒಂದೆಲಗ ಸೊಪ್ಪನ್ನ ಸಣ್ಣದಾಗಿ ಬಿಸಿಕೊಳ್ಳಬೇಕು. ಬಿಸಿಕೊಂಡಂತಹ ಒಂದೆಲಗ ಸೊಪ್ಪಿಗೆ ಒಗ್ಗರಣೆಯನ್ನು ನೀಡಿ ಅದರ ಜೊತೆಗೆ ಮಜ್ಜಿಗೆಯನ್ನು ಹಾಕಿ ಕುದಿಸಿದರೆ ಒಂದೆಲಗದ ತಂಬುಳಿ ಸಿದ್ದವಾಗುತ್ತದೆ.
ತಂಬುಳಿಗೆ ಅದರದೇ ಆದ ವಿಶಿಷ್ಟ ವಿಶೇಷ ಸ್ಥಾನ ಇದ್ದೆ ಇದೆ. ತಂಬುಳಿ ಅದೆಷ್ಟು ಲಘು ಆಹಾರ ಮತ್ತು ಆರೋಗ್ಯದಾಯಕ ಎಂದರೆ ಅದನ್ನು ಉಂಡು ಕೆಟ್ಟವರು, ಹೊಟ್ಟೆ ಕೆಡಿಸಿಕೊಂಡವರು ಯಾರು ಇರಲಿಕ್ಕಿಲ್ಲ. ಇದರಲ್ಲಿ ಅದೆಷ್ಟೋ ಔಷಧಿಯುಕ್ತ ವಸ್ತುಗಳಿರುವುದರಿಂದ ಜೀರ್ಣಕ್ರಿಯೆ ಸುಲಭಗೊಳಿಸುತ್ತದೆ.ತಂಬುಳಿಯು ಅತ್ಯಂತ ಸರಳವಾಗಿ ಹೆಚ್ಚುವರಿ ಖರ್ಚಿಲ್ಲದೆ ತಯಾರಾಗುವ ಖಾದ್ಯವಾಗಿರುವುದರಿಂದ ತನ್ನತನವನ್ನು ಜೋಪಾನವಾಗಿ ಕಾದಿಟ್ಟುಕೊಂಡಿದೆ. ಕೆಲವೊಂದು ತಂಬುಳಿ ಖಾದ್ಯಗಳು ಪಾರಂಪರಿಕವಾಗಿ ಬಂದಿದವಾಗಿವೆ. ಇನ್ನಾವ ಖಾದ್ಯಕ್ಕೂ ಇದರ ಸ್ಥಾನ ತುಂಬಲು ಸಾಧ್ಯವಾಗಿಲ್ಲ. ತಂಬುಳಿ ರುಚಿಯನ್ನು ಬಲ್ಲವರೆ ಬಲ್ಲರು ಒಮ್ಮೆ ರುಚಿ ಕಂಡವರು ಇದರ ಬೆನ್ನು ಹತ್ತುವುದರಲ್ಲಿ ಸಂಶಯವೇ ಇಲ್ಲ.
ಮೇಘಾ ಜಗದೀಶ್
ಆಲ್ಮಾ ಸ್ಕೂಲ್ ವಿದ್ಯಾರ್ಥಿನಿ