ಕೊಲ್ಕತ್ತಾವನ್ನು ʼಗಾರ್ಬೇಜ್ ಸಿಟಿʼ ಎಂದ ತೆಲಂಗಾಣ ಸಿಎಂ!!
ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಕೋಲ್ಕತ್ತಾ ಒಂದು ʼಗಾರ್ಬೇಜ್ ಸಿಟಿʼ ಎನ್ನುವರ್ಥದ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ತೆಲಂಗಾಣದ ಸಮಾರಂಭವೊಂದರಲ್ಲಿ ಮಾತನಾಡಿ, “ಒಂದೊಮ್ಮೆ ಜಗತ್ತಿನಲ್ಲಿ ಹೆಚ್ಚು ಮಲಿನವಾದ ನಗರ ಯಾವುದು ಎನ್ನುವ ಸ್ಪರ್ಧೆ ಏರ್ಪಟ್ಟಲ್ಲಿ, ಖಂಡಿತವಾಗಿಯೂ ಅದರಲ್ಲಿ ಕೋಲ್ಕತ್ತಾ ಮೊದಲ ಸ್ಥಾನ ಪಡೆಯಲಿದೆ” ಎಂದಿದ್ದಾರೆ. “ದೆಹಲಿಯಲ್ಲಿ ಯಾವ ಮಟ್ಟದ ವಾಯುಮಾಲಿನ್ಯ ಹಾಗೂ ಶಬ್ದ ಮಾಲಿನ್ಯ ಉಂಟಾಗುತ್ತಿದೆ ಎಂದು ನೀವೆಲ್ಲಾ ಮಾಧ್ಯಮಗಳಲ್ಲಿ, ದಿನ ಪತ್ರಿಕೆಗಳಲ್ಲಿ ಓದುತ್ತಿರಬಹುದು. ಅಲ್ಲಿ ಮಾಲಿನ್ಯ ಹೆಚ್ಚಳದಿಂದ, ಶಾಲಾ ಮಕ್ಕಳು ತಮ್ಮ ತಮ್ಮ ಶಾಲೆಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಶಾಲೆಗಳಿಗೆ ರಜೆ ಘೋಷಿಸಿ, ವಿದ್ಯಾರ್ಥಿಗಳೆಲ್ಲರಿಗೂ ಮನೆಯಲ್ಲಿಯೇ ಆನ್‌ಲೈನ್ ಮುಖಾಂತರ ಪಾಠಗಳನ್ನು ಕೇಳುವಂತೆ ಸೂಚಿಸಲಾಗಿದೆ. ಉದ್ಯೋಗಿಗಳಿಗೆ ತಮ್ಮ ಕಛೇರಿಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಪರಿಸ್ಥಿತಿ ಯಾವ ಮಟ್ಟಿಗೆ ಹದಗೆಟ್ಟಿದೆಯೆಂದರೆ, ಲೋಕಸಭೆಯನ್ನು ಸರಿಯಾಗಿ ನಡೆಸಲಾಗುತ್ತಿಲ್ಲ” ಎಂದು ಸಿಎಂ ರೇವಂತ್ ರೆಡ್ಡಿ ಹೇಳಿದ್ದಾರೆ.
ಈ ಬಗ್ಗೆ ಮುಂದುವರೆದು ಮಾತನಾಡಿದ ಅವರು, “ನಾನು ಯಾವ ಕಾರಣಕ್ಕೂ ದೆಹಲಿಗೆ ಭೇಟಿ ನೀಡುವುದಿಲ್ಲ. ಒಂದು ವೇಳೆ ನಾನೇದಾರೂ ದೆಹಲಿಗೆ ಭೇಟಿ ನೀಡಿದಲ್ಲಿ, ಖಂಡಿತವಾಗಿಯೂ ನನ್ನ ಆರೋಗ್ಯ ಹದಗೆಡಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಒಬ್ಬ ಕೇಂದ್ರ ಸಚಿವರೇ ದೆಹಲಿಯ ಬಗ್ಗೆ ಈ ರೀತಿ ಹೇಳುತ್ತಾರೆಂದರೆ, ಪ್ರತಿಯೊಬ್ಬರೂ ಇದರ ಗಂಭೀರತೆಯ ಬಗ್ಗೆ ಅರಿಯಬೇಕು” ಎಂದರು. “ಇಡೀ ದೆಹಲಿಗೆ ರಜೆ ಘೋಷಿಸಿ, ಸಂಪೂರ್ಣ ದೆಹಲಿಯನ್ನು ಬಂದ್ ಮಾಡಬೇಕಾದ ಪರಿಸ್ಥಿತಿ ಇದೆ. ಅದೇ ರೀತಿ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಎಷ್ಟು ಕೆಟ್ಟದಾಗಿದೆ ಎಂದು ನೀವೆಲ್ಲಾ ನೋಡಿರಬಹುದು. ಇನ್ನು ಚೆನ್ನೈ ಮತ್ತು ಮುಂಬೈನಲ್ಲಿ ಮಳೆ ಬಂದರೆ, ರಸ್ತೆಯಲ್ಲೇ ಜನರು ಬೋಟ್ʼನಲ್ಲಿ ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ದೆಹಲಿ, ಮುಂಬೈ, ಚೆನ್ನೈ, ಕೊಲ್ಕತ್ತಾ, ಬೆಂಗಳೂರು, ಹೈದರಾಬಾದ್ ಈ ಆರು ಮಹಾನಗರಗಳ ಪೈಕಿ, ಕೇವಲ ನಾವು(ಹೈದರಾಬಾದ್) ಮಾತ್ರ ಸುಸ್ಥಿತಿಯಲ್ಲಿದ್ದೇವೆ” ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.
ಗಜಾನನ ಭಟ್
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿ