ಯುದ್ಧ ನಡೆದರೆ ಕ್ಷಣಾರ್ಧದಲ್ಲಿ ಯುಕೆ ಸೈನ್ಯ ಸರ್ವನಾಶ!! – ಯುಕೆ ಸಚಿವ
ಇವತ್ತಿನ ಪರಿಸ್ಥಿತಿಯಲ್ಲಿ ಯುಕೆ ಒಂದೊಮ್ಮೆ, ರಷ್ಯಾ – ಯುಕ್ರೇನ್ ರೀತಿಯ ದೊಡ್ಡ ಪ್ರಮಾಣದ ಯುದ್ಧದಲ್ಲಿ ಭಾಗಿಯಾಗಬೇಕಾಗಿ ಬಂದರೆ, ಯುಕೆ ಸೈನ್ಯ ಕೇವಲ 6 ತಿಂಗಳಲ್ಲಿ ಸರ್ವನಾಶವಾಗಲಿದೆ ಎಂದು, ಯುಕೆ ಸಚಿವ ಅಲಿಸ್ಟರ್ ಕಾರ್ನ್ಸ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಸ್ವತಃ ಯುಕೆ ರಾಯಲ್ ನೇವಿಯ ನಿವೃತ್ತ ಮರೀನ್ ಕೂಡಾ ಆಗಿರುವ ಕಾರ್ನ್ಸ್, ಲಂಡನ್‌ನಲ್ಲಿ ಈ ಹೇಳಿಕೆ ನೀಡಿದ್ದಾರೆ. “ರಷ್ಯಾ – ಯುಕ್ರೇನ್ ಯುದ್ಧದಲ್ಲಿ ಪ್ರತಿನಿತ್ಯ 1500 ರಷ್ಯಾ ಸೈನಿಕರು ಸಾವನ್ನಪ್ಪುತ್ತಿದ್ದಾರೆ ಅಥವಾ ಗಾಯಗೊಳ್ಳುತ್ತಿದ್ದಾರೆ, ನಿತ್ಯವೂ ರಷ್ಯಾ ನಷ್ಟ ಅನುಭವಿಸುತ್ತಿದೆ. ಇದೇ ಲೆಕ್ಕದಲ್ಲಿ ನೋಡುವುದಾದರೆ, ಅಂತರಾಷ್ಟ್ರೀಯ ಬೆಳವಣಿಗೆಗಳ ಕಾರಣ ನಮ್ಮ ಸೈನ್ಯ 6 ತಿಂಗಳು ಅಥವಾ 1 ವರ್ಷದಲ್ಲಿ ಇನ್ನೂ ಹೆಚ್ಚಿನ ಹಾನಿಯನ್ನು ಅನುಭವಿಸುತ್ತದೆ. ಹಾಗಾಗಿ ಯಾವುದೇ ಬಿಕ್ಕಟ್ಟಿನ ಸಂದರ್ಭದಲ್ಲಿ, ನಮ್ಮ ಸೈನ್ಯದ ಸಬಲೀಕರಣ ಮತ್ತು ಸಂಪನ್ಮೂಲಗಳ ಕ್ರೋಢೀಕರಣ ಮಾಡುವುದು ನಮ್ಮ ಆದ್ಯತೆಯಾಗಿರಬೇಕು” ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
1800 ರ ಬಳಿಕ, ಇಂಗ್ಲೆಂಡ್ ಸಶಸ್ತ್ರ ಪಡೆಗಳ ಸಂಖ್ಯೆ ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿದಿದೆ ಎಂದು ಯುಕೆ ಅಧಿಕೃತ ದಾಖಲೆಗಳು ಹೇಳುತ್ತಿವೆ. ಅಕ್ಟೋಬರ್ 1, 2024 ರವರೆಗಿನ ದಾಖಲೆಗಳ ಪ್ರಕಾರ, ಬ್ರಿಟಿಷ್ ಸೈನ್ಯದಲ್ಲಿ ಸುಮಾರು 26,000 ಸ್ವಯಂಸೇವಕರ ಮೀಸಲು ಪಡೆಯೂ ಸೇರಿದಂತೆ, ಒಟ್ಟೂ 1,09,245 ಸೈನಿಕರಿದ್ದಾರೆ. ಅದರೆ ಈ ಸಂಖ್ಯೆಯು ಚೈನಾದ 20 ಲಕ್ಷ ಸೈನ್ಯಕ್ಕೆ ಹೋಲಿಸಿದರೆ, ರಷ್ಯಾದ 13 ಲಕ್ಷ ಸೈನ್ಯಕ್ಕೆ ಹೋಲಿಸಿದರೆ ಅಥವಾ ಅಮೆರಿಕ ಸೈನ್ಯದಲ್ಲಿ ಕರ್ತವ್ಯದಲ್ಲಿರುವ 4,60,000 ಸೈನಿಕರ ಸಂಖ್ಯೆಗೆ ಹೋಲಿಸಿದರೆ ತುಂಬಾ ಕಡಿಮೆ.
“ರಕ್ಷಣಾ ಕಾರ್ಯದರ್ಶಿ ಜಾನ್ ಹೀಲಿ ಅವರು, ಈ ಹಿಂದೆಯೇ ರಕ್ಷಣಾ ಪಡೆಗಳ ಸ್ಥಿತಿಗತಿಗಳ ಬಗ್ಗೆ ಮಾತಾಡಿದ್ದಾರೆ” ಎಂದು ಪ್ರಧಾನಿಗಳ ಅಧಿಕೃತ ವಕ್ತಾರ ಹೇಳಿದ್ದಾರೆ. “ಎಲ್ಲಾ ಚರ್ಚೆಗಳ ಬಳಿಕ, ದೇಶವು ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಮರ್ಥವಾಗಿದೆ ಮತ್ತು ಅದಕ್ಕೆ ಅಗತ್ಯವಾದಷ್ಟು ಸಂಪನ್ಮೂಲಗಳನ್ನು ಹೊಂದಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು, ರಕ್ಷಣಾ ಕಾರ್ಯತಂತ್ರದ ಸಮಗ್ರ ವಿಮರ್ಷೆ ನಡೆಯಿತು” ಎಂದು ಅವರು ಹೇಳಿದರು. ರಕ್ಷಣಾ ಕಾರ್ಯದರ್ಶಿ ಜಾನ್ ಹೀಲಿ, ತನ್ನ ಹಿಂದಿನ ಹೇಳಿಕೆಯಲ್ಲಿ “ಇಂಗ್ಲೆಂಡ್ ಸೈನ್ಯವು ಯಾವುದೇ ಕಾರ್ಯಾಚರಣೆಯನ್ನು ನಡೆಸಲು ಸಶಕ್ತವಾಗಿದೆ, ಆದರೆ ಯಾವುದೇ ಯುದ್ಧದ ಸಂದರ್ಭದಲ್ಲಿ ಶತ್ರು ಸೈನ್ಯವನ್ನು ಸೋಲಿಸುವಷ್ಟು ನಮ್ಮ ಸೈನ್ಯ ಸಶಕ್ತವಾಗಿಲ್ಲ” ಎಂದು ಹೇಳಿದರು.
ಗಜಾನನ ಭಟ್
ಆಲ್ಮಾ ಮೀಡಿಯಾ ವಿದ್ಯಾರ್ಥಿ