Alma Corner

ವಿಜಯ್‌ ಹಜಾರೆ ಟ್ರೋಫಿ: ಪುದುಚೇರಿ ಮಣಿಸಿದ ಕರ್ನಾಟಕ!!

              ಸ್ಮರಣ್‌ ರವಿಚಂದ್ರನ್‌ ಆಕರ್ಷಕ ಶತಕದ ನೆರವಿನಿಂದ, ಕರ್ನಾಟಕ ತಂಡವು ವಿಜಯ್‌ ಹಜಾರೆ ಟ್ರೋಫಿಯಲ್ಲಿ ಮತ್ತೊಂದು ಜಯ ದಾಖಲಿಸಿದೆ. ಕಳೆದ ಪಂದ್ಯದಲ್ಲಿ ಮುಂಬೈ ತಂಡವನ್ನು ಮಣಿಸಿದ್ದ ಕರ್ನಾಟಕ, ಈಗ ಪುದುಚೇರಿ ತಂಡವನ್ನು ಮಣಿಸಿದೆ. ಪಂದ್ಯದಲ್ಲಿ ಆಕರ್ಷಕ ಶತಕ ದಾಖಲಿಸಿದ ಸ್ಮರಣ್‌ ರವಿಚಂದ್ರನ್‌ ಅಜೇಯರಾಗುಳಿದರು.

              ಟಾಸ್‌ ಗೆದ್ದ ಕರ್ನಾಟಕ ಮೊದಲು ಬೌಲಿಂಗ್‌ ಆಯ್ದುಕೊಂಡಿತು. ವಿದ್ಯಾಧರ್‌ ಪಾಟೀಲ್‌ ಅವರ ಮಾರಕ ದಾಳಿಗೆ ತತ್ತರಿಸಿದ ಪುದುಚೇರಿ 31 ರನ್‌ʼಗಳಿಗೆ 5 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಅರುಣ್‌ ಕಾರ್ತಿಕ್ ಹಾಗೂ ಹಕೀಂ ಅಮನ್‌ ಖಾನ್ ಅವರ‌ ಬ್ಯಾಟಿಂಗ್‌ ಜುಗಲ್ಬಂದಿ ಪುದುಚೇರಿ ತಂಡಕ್ಕೆ ಆಸರೆಯಾಯಿತು. ತಂಡದ ಪರವಾಗಿ ಅರುಣ್‌ ಕಾರ್ತಿಕ್‌ 71 ರನ್‌, ಅಮನ್‌ ಖಾನ್‌ 45 ರನ್‌ ಹಾಗೂ ಸಾಗರ್‌ ಉದೇಶಿ 21 ರನ್‌ ಗಳಿಸಿದರು. ಅಂತಿಮವಾಗಿ ಪದುಚೇರಿ ತಂಡ 50 ಓವರ್‌ʼಗಳಲ್ಲಿ 9 ವಿಕೆಟ್‌ ನಷ್ಟಕ್ಕೆ  211 ರನ್‌ ಗಳಿಸಿತು.

             212 ರನ್‌ʼಗಳ ಗೆಲುವಿನ ಗುರಿ ಬೆನ್ನತ್ತಿದ ಕರ್ನಾಟಕ, ಆರಂಭಿಕ ಹಂತದಿಂದಲೇ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿತು. ತಂಡದ ಮೊತ್ತ 78 ರನ್‌ ಆಗುವಷ್ಟರಲ್ಲಿ, ಅಗ್ರ ಕ್ರಮಾಂಕದ ನಾಲ್ವರು ಬ್ಯಾಟ್ಸ್‌ʼಮನ್ ಅದಾಗಲೇ ಪೆವಿಲಿಯನ್‌ ಸೇರಿದ್ದರು.  ಆದರೆ 5ನೇ ವಿಕೆಟ್‌ʼಗೆ ಸ್ಮರಣ್‌ ರವಿಚಂದ್ರನ್‌ ಹಾಗೂ ಶ್ರೇಯಸ್‌ ಗೋಪಾಲ್‌ ಅವರ 113 ರನ್‌ʼಗಳ ಪಾಲುದಾರಿಕೆ, ಕರ್ನಾಟಕವನ್ನು ಗೆಲುವಿನ ಸನಿಹಕ್ಕೆ ಕೊಂಡೊಯ್ದಿತ್ತು. ತಂಡದ ಮೊತ್ತ 191 ಆಗಿದ್ದಾಗ 40 ರನ್‌ ಗಳಿಸಿದ್ದ ಶ್ರೇಯಸ್‌ ಗೋಪಾಲ್‌ ಔಟಾದರು. ಇನ್ನೆರಡು ವಿಕೆಟ್‌ʼಗಳು ಕೂಡಾ ಬೇಗನೆ ಉರುಳುವುದರೊಂದಿಗೆ, ಕರ್ನಾಟಕಕ್ಕೆ ಸೋಲಿನ ಆತಂಕ ಎದುರಾಗಿತ್ತು. ಆದರೆ ಪಂದ್ಯದಲ್ಲಿ ಗಟ್ಟಿಯಾಗಿ ನಿಂತ ಸ್ಮರಣ್‌ ರವಿಚಂದ್ರನ್‌, ಆಕರ್ಷಕ ಶತಕ ಬಾರಿಸಿದ್ದೂ ಅಲ್ಲದೇ, ಕರ್ನಾಟಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಅಂತಿಮವಾಗಿ ಕರ್ನಾಟಕ ತಂಡ 7 ವಿಕೆಟ್‌ ನಷ್ಟಕ್ಕೆ 214 ರನ್‌ ಗಳಿಸಿತು.

ಗಜಾನನ ಭಟ್

ಆಲ್ಮಾ ಮೀಡಿಯಾ ಸ್ಕೂಲ್‌ ವಿದ್ಯಾರ್ಥಿ

Show More

Leave a Reply

Your email address will not be published. Required fields are marked *

Related Articles

Back to top button