ಶಿವಣ್ಣನ ಹುಟ್ಟು ಹಬ್ಬಕ್ಕೆ ‘ಭೈರತಿ ರಣಗಲ್’ ಟೀಸರ್ ಬಿಡುಗಡೆ.
ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಹುಟ್ಟು ಹಬ್ಬದ ದಿನದಂದು, ಶಿವಣ್ಣ ಅಭಿನಯದ ಭೈರತಿ ರಣಗಲ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ.
ಈ ಚಿತ್ರವು ಗೀತಾ ಪಿಕ್ಚರ್ಸ್ ಪ್ರೊಡಕ್ಷನ್ ಹೌಸ್ ನಿಂದ ನಿರ್ಮಾಣವಾಗಿದ್ದು, ಶ್ರೀಮತಿ ಗೀತಾ ಶಿವರಾಜ್ ಕುಮಾರ್ ಅವರು ಈ ಚಿತ್ರಕ್ಕೆ ಹಣ ಹೂಡಿದ್ದಾರೆ. ಭೈರತಿ ರಣಗಲ್ ಚಿತ್ರದ ಬರಹ ಮತ್ತು ನಿರ್ದೇಶನವನ್ನು ನರ್ತನ್ ವಹಿಸಿಕೊಂಡಿದ್ದಾರೆ. ನವೀನ್ ಕುಮಾರ್.ಐ ಅವರ ಛಾಯಾಗ್ರಹಣ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಲಿದೆ. ರವಿ ಬಸ್ರೂರ್ ಅವರು ಈ ಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿದ್ದಾರೆ.
ಭೈರತಿ ರಣಗಲ್ ಚಿತ್ರವು 2017ರಲ್ಲಿ ತೆರೆಗೆ ಬಂದ ಮಫ್ತಿ ಚಿತ್ರದ ಫ್ರೀಕ್ವೆಲ್ ಆಗಿದೆ. ಮಫ್ತಿ ಚಿತ್ರದಲ್ಲಿ ರಾಕ್ಷಸ ಸ್ವರೂಪವನ್ನು ತೋರಿಸಿದ ಭೈರತಿ ರಣಗಲ್ ಪಾತ್ರದ ಮೂಲ ಹಾಗೂ ಆ ಪಾತ್ರ ಇಷ್ಟೊಂದು ಕ್ರೂರ ರೂಪ ತಾಳಿದ್ದು ಹೇಗೆ ಎಂಬ ಪ್ರಶ್ನೆಗೆ ಈ ಚಿತ್ರ ಉತ್ತರ ಕೊಡಲಿದೆ. ಬಿಡುಗಡೆಯಾದ ಟೀಸರ್ ಪ್ರೇಕ್ಷಕರ ಮನವನ್ನು ಗೆಲ್ಲಲಿದೆ. ಇದಕ್ಕೆ ಕಾರಣ ಆಕಾಶ್ ಹಿರೇಮಠ್ ಅವರ ಅದ್ಭುತ ಸಂಕಲನ. ಒಟ್ಟಿನಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆ ಆಗುವ ಬೈರತಿ ರಣಗಲ್, ಶಿವಣ್ಣನ ಅಭಿಮಾನಿಗಳಿಗೆ ಈ ಚಿತ್ರ ಬಂಪರ್ ಮನರಂಜನೆ ನೀಡಲಿದೆ ಎನ್ನಬಹುದು.