Alma Corner

ಕನ್ನಡ ಹಬ್ಬಕ್ಕೆ ಮೆರಗು ತಂದ ಪುಸ್ತಕ ಮೇಳ…!

ವಿಜಯ ಕರ್ನಾಟಕ ದಿನ ಪತ್ರಿಕೆ ಸೆಂಟ್ರಲ್‌ ಕಾಲೇಜು ಕಾಂಪಸ್‌ನ ಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ʼವಿ ಕ ಕನ್ನಡ ಹಬ್ಬʼವನ್ನು  ಶನಿವಾರ ಅಧಿಕೃತವಾಗಿ ಉದ್ಘಾಟಿಸಲಾಯಿತು.ಶನಿವಾರ ಮತ್ತು ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಎರಡು ದಿನವೂ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. 

 ಮೊದಲ ದಿನ ವಿಪಕ್ಷ ನಾಯಕರಾದ ಆರ್. ಅಶೋಕ್‌, ಕೇಂದ್ರ ಸಚಿವರಾದ ವಿ.ಸೋಮಣ್ಣ, ಶಾಸಕರಾದ ಪ್ರದೀಪ್‌ ಈಶ್ವರ್‌, ನಟ ಶ್ರೀ ಮುರಳಿ, ನಟಿ ಶರಣ್ಯ ಶೆಟ್ಟಿ, ವನ್ಯಜೀವಿ ಛಾಯಾಗ್ರಾಯಕ ಅಮೋಘವರ್ಷ, ವಿಜಯ ಕರ್ನಾಟಕದ ನೂತನ ಸಿಇಒ ದೀಪಕ್‌ ಸಲೂಜಾ ಸೇರಿದಂತೆ ಮುಂತಾದ ಗಣ್ಯರು ಸೇರಿದ್ದರು.

ಎರಡನೇ ದಿನದ ಕಾರ್ಯಕ್ರಮಗಳನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಉದ್ಘಾಟಿಸಿದರು. ಇವರು ವಿ ಕ ತಂಡ ಪ್ರಸ್ತಾಪಿಸಿದ ಕನ್ನಡ ಭಾಷೆಯನ್ನು ಉಳಿಸುವ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದರು.

ಈ ಸಮಾರಂಭದಲ್ಲಿ ಪುಸ್ತಕ ಪ್ರದರ್ಶನ, ಆಹಾರ ಮೇಳ ಸೇರಿದಂತೆ ಹಲವಾರು ಸಾಂಸ್ಕೃತಿಕ  ಕಾರ್ಯಕ್ರಮಗಳು ನಡೆದವು.ಪುಸ್ತಕ ಮೇಳವನ್ನು ಬರಹಗಾರ ವಸುಧೇಂದ್ರ ಮತ್ತು ನಟಿ ಶ್ವೇತಾ ಶ್ರೀವಾಸ್ತವ ಉದ್ಘಾಟಿಸಿ ಪುಸ್ತಕಗಳೊಂದಿಗೆ ಸ್ನೇಹ ಬೆಳೆಸಿ ಕೊಳ್ಳುವುದು ಎಷ್ಟು ಮುಖ್ಯ ಎಂದು ಜನರಿಗೆ ತಿಳಿಸಿದರು. ಜನರ ಬಾಯಲ್ಲಿ ನೀರೂರಿಸುವ ಖಾದ್ಯಗಳೊಂದಿಗೆ ಆಹಾರ ಮೇಳ ಯಶಸ್ವಿ ಆಯಿತು. ಈ ಆಹಾರ ಮಳಿಗೆಗಳಿಗೆ ಒಗ್ಗರಣೆ ಡಬ್ಬಿ ಮುರಳಿ ಚಾಲನೆ ನೀಡಿದರು. ಶಾಸಕರಾದ ಪ್ರದೀಪ್‌ ಈಶ್ವರ್‌ ರವರು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಅರಿವು ಮೂಡಿಸಲು ತಮ್ಮ ಭಾಷಣದ ಮೂಲಕ ಪ್ರೇರೇಪಿಸಿದರು. ಕುದ್ರೋಳಿ ಗಣೇಶ್‌ ಅವರ ಮನಮೋಹಕ ಜಾದೂ ಪ್ರದರ್ಶನವೂ ಜಾದೂ ಪ್ರೇಮಿಗಳ ಮನಸೂರೆಗೊಂಡಿತು. ಹಿರಿಯ ನಟರಾದ ಮುಖ್ಯಮಂತ್ರಿ ಚಂದ್ರು ಅವರ ʼಮುಖ್ಯಮಂತ್ರಿʼ ನಾಟಕ ಗಮನಾರ್ಹ ಆಕರ್ಷಣೆಯಾಗಿತ್ತು. ಈ ವಿ ಕ ಕನ್ನಡ ಮೇಳದಲ್ಲಿ ಹುಲಿವೇಷ, ಮಲ್ಲಕಂಬ, ಯಕ್ಷಗಾನ, ವೀರಗಾಸೆ ಕಾರ್ಯಕ್ರಮದ ಮೆರಗು ಹೆಚ್ಚಿಸಿದವು. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ಆಕರ್ಷಕ ಪ್ಯಾಷನ್‌ ಶೋ ಮತ್ತು ನೃತ್ಯ ಪ್ರದರ್ಶನಗಳು ನಡೆದವು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ೭ ಸಾಧಕರಿಗೆ ʼವಿಕ ಗೌರವʼ ನೀಡಿ ಸನ್ಮಾನಿಸಲಾಯಿತು. ಚಿತ್ರರಂಗದಿಂದ ಹಿರಿಯ ನಟರಾದ ದೇವರಾಜ್‌, ಕ್ರೀಡಾ ಕ್ಷೇತ್ರದಿಂದ ಅರ್ಜುನ್‌ ಹಾಲಪ್ಪ, ವನ್ಯಜೀವಿ ಛಾಯಾಗ್ರಾಯಕ ಹಾಗೂ ಚಿತ್ರ ನಿರ್ದೇಶಕ ಅಮೋಘವರ್ಷ, ಅಪೋಲೋ ಆಸ್ಪತ್ರೆಯ ಹಿರಿಯ ಮೂಳೆತಜ್ಞ ಡಾ. ರಾಜಶೇಕರ್‌ ಕೆ.ಟಿ, ಸಮಾಜ ಸೇವೆ ಮತ್ತು ಉದ್ಯಮ ಕ್ಷೇತ್ರದಿಂದ ಆನಂದ್.ವಿ.ಭಟ್‌, ವರ್ಣಚಿತ್ರಕಲಾವಿದರಾದ ಕಲಾ ನಿರ್ದೇಶಕ ಬಾದಲ್‌ ನಂಜುಂಡಸ್ವಾಮಿ ಹಾಗೂ ಆರೋಗ್ಯ ಮತ್ತು ಉದ್ಯಮ ಕ್ಷೇತ್ರದಿಂದ ಮಂಗಳಾಂಬಿಕೆ ರವರಿಗೆ ಈ ಗೌರವ ನೀಡಿ ಸನ್ಮಾನಿಸಲಾಯಿತು.

ಹಬ್ಬಕ್ಕೆ ಆಗಮಿಸಿದ ಸಾರ್ವಜನಿಕರಿಗೆ ರಕ್ತ ಪರೀಕ್ಷೆ, ಶ್ರವಣ ಪರೀಕ್ಷೆ, ನೇತ್ರ ತಪಾಸಣೆಯನ್ನು ಉಚಿತವಾಗಿ ಆಯೋಜಿಸಿದ್ದರು. ರಕ್ತದಾನ ಮಾಡುವ ಅವಕಾಶ ಕೂಡ ಇತ್ತು. ರಾಜ್ಯದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಮತ್ತು ನಟಿಯರಾದ ಪೂಜಾ ಗಾಂಧಿ ಮತ್ತು ಪ್ರಿಯಾಂಕಾ ಉಪೇಂದ್ರ ಅವರ ನೇತೃತ್ವದಲ್ಲಿ ಕನ್ನಡ ಕಲಿಕೆಯ ಕಾರ್ಯಾಗಾರದೊಂದಿಗೆ  ಕನ್ನಡೇತರರಿಗೆ ಭಾಷೆಯನ್ನು ಕಲಿಯಲು ವಿನೂತನ ಅವಕಾಶ ಕಲ್ಪಿಸಲಾಗಿತ್ತು

ದೇಶದ ವಿವಿಧ ರಾಜ್ಯಗಳಿಂದ ಆಕರ್ಷಕ ಸೀರೆಗಳು, ಮನೆಗೆ ಬೇಕಾದ ಕರಕುಶಲ ಮತ್ತು ಅಲಂಕಾರಿಕ ವಸ್ತುಗಳು, ಮಹಿಳೆಯರ ನೆಚ್ಚಿನ ಬೆಳ್ಳಿ ಅಭರಣಗಳು ಖರೀದಿದಾರರನ್ನು ಸೆಳೆದವು. ಅಲ್ಲದೆ ಅಲಂಕಾರಿಕ ಸಸಿಗಳ ಮಳಿಗೆಗಳು ಕೂಡ ವಿಶೇಷವಾಗಿದ್ದವು. ಚನ್ನಪಟ್ಟನದ ಗೊಂಬೆಗಳು, ಮಕ್ಕಳ ಆಟಿಕೆಗಳು, ಮಕ್ಕಳಿಗೋಸ್ಕರ ಆಡಲು ಜಂಪಿಂಗ್‌ ಕ್ಯಾಸಲ್‌ ಆಕರ್ಷಿಕವಾಗಿತ್ತು. 

Show More

Leave a Reply

Your email address will not be published. Required fields are marked *

Related Articles

Back to top button