Alma Corner

ಕರಿದ ಆಹಾರಗಳಿಂದಲೇ ಮಧುಮೇಹ ಹೆಚ್ಚಳ: ICMR ವರದಿ!

            ಕರಿದ ಆಹಾರಗಳ ಅತಿಯಾದ ಸೇವನೆ ಮಧುಮೇಹದ ಹೆಚ್ಚಳಕ್ಕೆ ಕಾರಣವಾಗುತ್ತದೆ. ಈಗಾಗಲೇ ಮಧುಮೇಹದಿಂದ ಬಳಲುತ್ತಿರುವವರು ಇಂತಹ ಆಹಾರ ಸೇವಿಸಿದರೆ, ಸಮಸ್ಯೆ ಉಲ್ಭಣವಾಗುತ್ತದೆ ಎಂದು ಇಂಡಿಯನ್‌ ಕೌನ್ಸಿಲ್‌ ಆಪ್‌ ಮೆಡಿಕಲ್‌ ರಿಸರ್ಚ್(‌ICMR)ನ ಕ್ಲಿನಿಕಲ್‌ ಪ್ರಯೋಗ ತಿಳಿಸಿದೆ. ಭಾರತದಲ್ಲಿ ಈ ರೀತಿಯ ಪ್ರಯೋಗ ಮೊದಲನೆಯದಾಗಿದೆ.

                             ಹಸಿ ಮಾಂಸ, ಕರಿದ ಪದಾರ್ಥಗಳು ಹಾಗೂ ಬೇಕರಿ ಉತ್ಪನ್ನಗಳಲ್ಲಿ AGE(Advanced Glycation End Product) ಅಂಶ ಹೆಚ್ಚಿರುತ್ತದೆ. ಇದರ ಅಧಿಕ ಸೇವನೆಯಿಂದ ಉರಿಯೂತ, ಅಧಿಕ ಒತ್ತಡ, ಇನ್ಸುಲಿನ್‌ ಉತ್ಪಾದನೆಯಲ್ಲಿ ಕುಸಿತ ಮುಂತಾದ ಆರೋಗ್ಯ ಸಮಸ್ಯೆಗಳು ತಲೆದೋರುತ್ತವೆ. ಮಧುಮೇಹದಿಂದ ಉಂಟಾಗಬಹುದಾದ ಅಪಾಯಗಳನ್ನು ನಿವಾರಿಸಿಕೊಳ್ಳಲು, ಕಡಿಮೆ ಪ್ರಮಾಣದ AGE ಅಂಶ ಹೊಂದಿರುವ ಆಹಾರ ಪದಾರ್ಥಗಳನ್ನು ಸೇವಿಸುವುದು ಮುಖ್ಯ ಎಂದು ಈ ವರದಿ ತಿಳಿಸುತ್ತದೆ.

                23 ಅಥವಾ ಅದಕ್ಕಿಂತಲೂ ಹೆಚ್ಚಿನ ʼಬಾಡಿ ಮಾಸ್‌ ಇಂಡೆಕ್ಸ್‌ʼ(BMI) ಹೊಂದಿರುವ, 38 ಜನ ಸ್ಥೂಲ ದೇಹಿಗಳ ಮೇಲೆ ಸತತ 12 ವಾರಗಳ ಕಾಲ ಸಂಶೋಧನೆ ನಡೆಸಿ, ಈ ಫಲಿತಾಂಶವನ್ನು ಕಂಡುಕೊಳ್ಳಲಾಗಿದೆ.  ಈ ಅಧ್ಯಯನದ ಸಮಯದಲ್ಲಿ ಸಂಶೋಧಕರು AGEಯುಕ್ತ ಆಹಾರ ಮತ್ತು AGE ರಹಿತ ಆಹಾರ, ಈ ಎರಡೂ ಬಗೆಯ ಆಹಾರಗಳ ಸೇವನೆಯಿಂದಾಗುವ ಪರಿಣಾಮವನ್ನು ಪರೀಕ್ಷಿಸಿದ್ದಾರೆ. ಕ್ಲಿನಿಕಲ್‌ ಪರೀಕ್ಷೆಯ ಸಂದರ್ಭದಲ್ಲಿ ಜನರನ್ನು ವಿಂಗಡಿಸಿ, ಒಂದು ಗುಂಪಿನವರಿಗೆ AGEಯುಕ್ತ ಆಹಾರವನ್ನೂ ಹಾಗೂ ಇನ್ನೊಂದು ಗುಂಪಿನವರಿಗೆ AGEರಹಿತ ಆಹಾರವನ್ನೂ ಸೇವಿಸಲು ಹೇಳಲಾಯಿತು. ನಂತರ ಪರೀಕ್ಷಿಸಿದಾಗ ಕಡಿಮೆ AGE ಅಂಶವಿರುವ ಆಹಾರ ಸೇವನೆ ಮಾಡಿರುವವರ ದೇಹದಲ್ಲಿ, ನಿಗದಿತ ಪ್ರಮಾಣದ ಇನ್ಸುಲಿನ್‌ ಉತ್ಪಾದನೆ ಹಾಗೂ ರಕ್ತದಲ್ಲಿ ಕಡಿಮೆ ಪ್ರಮಾಣದ ಸಕ್ಕರೆ ಅಂಶ ಕಂಡುಬಂತು. ಅದರೆ AGE ಪ್ರಮಾಣ ಹೆಚ್ಚಿರುವ ಆಹಾರ ಸೇವಿಸಿದವರ ದೇಹದ ಒಳಭಾಗದಲ್ಲಿ, ಅಂಗಾಂಗದ ಉರಿಯೂತ ಕಂಡುಬಂದಿದೆ.

           ಹುರಿಯುವುದು, ಎಣ್ಣೆಯಲ್ಲಿ ಕರಿಯುವುದು ಅಥವಾ ಗ್ರಿಲ್ಲಿಂಗ್‌ ಮಾಡುವಂತಹ ಅಡುಗೆ ವಿDಅನಗಳು, ಆಹಾರದಲ್ಲಿ AGE ಪ್ರಮಾಣವನ್ನು ಹೆಚ್ಚಿಸುತ್ತವೆ. ಆದರೆ ಆಹಾರವನ್ನು ಬೇಯಿಸುವುದು, ಆಹಾರದಲ್ಲಿ AGE ಪ್ರಮಾಣವನ್ನು ಕಡಿಮೆ ಮಾಡಲು ಸಹಕಾರ ಮಾಡುತ್ತದೆ. ಹಾಗಾಗಿ ಮಧುಮೇಹದ ಅಪಾಯಗಳನ್ನು ತಗ್ಗಿಸಲು, ಹಸಿರು ತರಕಾರಿಗಳು, ಹಣ್ಣುಗಳು, ಮೀನುಗಳು ಹಾಗೂ ಬೇಯಿಸಿದ ಆಹಾರಗಳನ್ನು ಹೆಚ್ಚು ಸೇವಿಸುವುದು ಸೂಕ್ತ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

         ಇತ್ತೀಚಿನ ಮಾಹಿತಿ ಪ್ರಕಾರ ಭಾರತದಲ್ಲಿ 10 ಕೋಟಿಗೂ ಹೆಚ್ಚು ಜನ ಮಧುಮೇಹದಿಂದ ಬಳಲುತ್ತಿದ್ದಾರೆ. ದೈಹಿಕ ಚಟುವಟಿಕೆ ಕಡಿಮೆಯಾಗಿರುವುದು, ಒತ್ತಡದ ಜೀವನಶೈಲಿ, ಅನಾರೋಗ್ಯಕರ ಆಹಾರ ಸೇವನೆ ಮುಂತಾದ ಕಾರಣಗಳಿಂದ, ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ನಿರಂತರವಾಗಿ ಹೆಚ್ಚಾಗುತ್ತಿದೆ ಎಂದು ವರದಿಗಳು ಹೇಳುತ್ತಿವೆ.

ಗಜಾನನ ಭಟ್‌

ಆಲ್ಮಾ ಮೀಡಿಯಾ ಸ್ಕೂಲ್‌ ವಿದ್ಯಾರ್ಥಿ

Show More

Leave a Reply

Your email address will not be published. Required fields are marked *

Related Articles

Back to top button