PRR-2 ಯೋಜನೆಗೆ ಬಿಡಿಎ ಸಜ್ಜು..!

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಪಿಆರ್‌ಆರ್-2 ಯೋಜನೆ ಅಡಿಯಲ್ಲಿ ಆರು ಹೊಸ ಬಡಾವಣೆಗಳ ನಿರ್ಮಾಣ ಯೋಜನೆ ಕೈಗೊಂಡಿದೆ. ಇದಕ್ಕಾಗಿ ಈ ಪ್ರದೇಶದ ಹಲವು ಗ್ರಾಮಗಳಲ್ಲಿ ಭೂಮಿಯನ್ನು ಸ್ವಾಧೀನಪಡಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸೂಕ್ತ ಸಿದ್ಧತೆಗಳನ್ನು ಆರಂಭಿಸಿದೆ.
ಪಿಆರ್‌ಆರ್ ( ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ) ಯೋಜನೆ ಎರಡು ಹಂತದಲ್ಲಿ ಅನುಷ್ಠಾನಗೊಳ್ಳಲಿದೆ. ಪಿಆರ್‌ಆರ್-1 ತುಮಕೂರು ಮತ್ತು ಹೊಸೂರು ರಸ್ತೆಯ ನಡುವಿನ ಸಂಪರ್ಕವನ್ನು ಕಲ್ಪಿಸುತ್ತದೆ. ಇದರ ಮುಂದುವರಿದ ಭಾಗವಾಗಿ ಹೊಸೂರು ರಸ್ತೆ ಹಾಗೂ ಬೆಂಗಳೂರು – ಮೈಸೂರು ರಸ್ತೆಯನ್ನು ಪಿಆರ್‌ಆರ್-2 ಸಂಪರ್ಕಿಸಲಿದೆ. ಪಿಆರ್‌ಆರ್-2 ಬನ್ನೇರುಘಟ್ಟ ರಸ್ತೆ, ಕನಕಪುರ ರಸ್ತೆ ಮಾರ್ಗವಾಗಿ ಸಾಗಲಿದೆ.
ಪಿಆರ್‌ಆರ್-2 ಯೋಜನೆಯಡಿ 100 ಮೀಟರ್ ಅಗಲದಲ್ಲಿ 30 ಕಿ.ಮೀ. ಉದ್ದದ ರಸ್ತೆಯನ್ನು ನಿರ್ಮಿಸಲಾಗುತ್ತಿದೆ. ಜತೆಗೆ ಈ ಕಾರಿಡಾರ್‌ನ ಎರಡೂ ಬದಿಗಳಲ್ಲಿ ತಲಾ 24 ಮೀಟರ್ ಉದ್ದಕ್ಕೂ ವಾಣಿಜ್ಯ ನಿವೇಶನಗಳನ್ನು ರಚಿಸಲಾಗುತ್ತದೆ. ಈ ವಾಣಿಜ್ಯ ಪ್ರದೇಶವನ್ನು ಮಾರಾಟ ಮಾಡಿ ವ್ಯವಹಾರಕ್ಕೆ ಉತ್ತೇಜನ ನೀಡಲು ಉದ್ದೇಶಿಸಲಾಗಿದೆ.

ಪಿಆರ್‌ಆರ್-2 ಯೋಜನೆಯಡಿ ಹೊಸ ಬಡಾವಣೆಗಳನ್ನು ರೂಪಿಸಲು ಅಗತ್ಯವಾದ ಜಮೀನನ್ನು ಗುರುತಿಸಿ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲು ಮುಂದಾಗಿದೆ. ಈ ಸಂಬಂಧ, ಪ್ರಾಥಮಿಕ ಅಧಿಸೂಚನೆ ಹೊರಡಿಸುವ ಮುನ್ನ, ರೈತರಿಗೆ ನಷ್ಟಪೂರಕ ಪರಿಹಾರ ನೀಡಲು ತೀರ್ಮಾನಿಸಲಾಗಿದೆ. ಹೀಗಾಗಿ ಸದರಿ ಯೋಜನೆಗಾಗಿ ಬೇಕಾದ ಜಮೀನುಗಳನ್ನು ಗುರುತಿಸಲು ಅಭಿಯಂತರ ಅಧಿಕಾರಿಗಳ ಜೊತೆ ಸಮನ್ವಯ ಮಾಡಿಕೊಂಡು ಪ್ರಾಥಮಿಕ ಅಧಿಸೂಚನೆಗೆ ಅಗತ್ಯವಾದ ವಿವರಗಳನ್ನು ಸಂಗ್ರಹಿಸಲು ಸೂಚಿಸಲಾಗಿದೆ. ಇದಕ್ಕಾಗಿ ಭೂಸ್ವಾಧೀನಾಧಿಕಾರಿಗಳ ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗಿದ್ದು, ಜಮೀನಿನ ಮಾಲೀಕರ ಹೆಸರು, ವಿಸ್ತೀರ್ಣದ ವಿವರ, ಜಮೀನಿನ ನಕ್ಷೆ, ಚಕ್ಕುಬಂದಿ ಹಾಗೂ ಇತರ ಅಗತ್ಯ ದಾಖಲೆಗಳನ್ನು ಸಂಗ್ರಹಿಸಲು ಆದೇಶಿಸಲಾಗಿದೆ.
ಈ ಪ್ರಕ್ರಿಯೆಯ ಮೂಲಕ, ಹೊಸ ಬಡಾವಣೆ ನಿರ್ಮಾಣಕ್ಕೆ ಅಗತ್ಯ ಜಮೀನುಗಳನ್ನು ಎಚ್ಚರಿಕೆಯಿಂದ ಗುರುತಿಸಲು ಮತ್ತು ರೈತರಿಗೆ ನ್ಯಾಯಯುತ ಪರಿಹಾರ ಒದಗಿಸಲು ವ್ಯವಸ್ಥೆ ಮಾಡಲಾಗಿದೆ. ಬಿಡಿಎ ಸೈಟುಗಳಿಗೆ ಒತ್ತಾಯ ಹೆಚ್ಚುತ್ತಿರುವ ಹಿನ್ನಲೆಯಲ್ಲಿ, ಬಿಡಿಎ ಮುಂದಿನ ದಿನಗಳಲ್ಲಿ 50,000 ಸೈಟುಗಳನ್ನು ಅಭಿವೃದ್ಧಿಪಡಿಸಲು ಗುರಿ ಹೊಂದಿದೆ. ಯೋಜನೆಯಡಿ ಭೂಮಿ ಒದಗಿಸುವವರಿಗೆ 40:60ರ ಅನುಪಾತದಲ್ಲಿ ಪರಿಹಾರ ನೀಡಲು ತೀರ್ಮಾನಿಸಲಾಗಿದೆ. ಬಿಡಿಎ ನಿಯಮಗಳ ಪ್ರಕಾರ, ಭೂಮಿ ನೀಡುವವರಿಗೆ ಅದೇ ಬಡಾವಣೆಯಲ್ಲಿರುವ ನಿವೇಶನವನ್ನು ಒದಗಿಸಲಾಗುತ್ತದೆ.

ಸೈಟುಗಳ ಅಭಿವೃದ್ಧಿಯ ನಂತರ, ಅವುಗಳ ಮೌಲ್ಯವನ್ನು ನಿರ್ಧರಿಸಲಾಗುವುದು ಎಂದು ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಯಾವ ಗ್ರಾಮಗಳಲ್ಲಿ ಬಡಾವಣೆಗಳಿಗೆ ಭೂಮಿ ?
ಬಿ.ಎಂ. ಕಾವಲ್, ಗುಳಕಮಲೆ, ಕಗ್ಗಲೀಪುರ, ಓ.ಬಿ. ಚೂಡನಹಳ್ಳಿ, ಅಗರ, ಉತ್ತರಿ, ದೇವಗೆರೆ, ಗುಡಿಮಾವು, ಕಂಬೀಪುರ, ಗಂಗಸಂದ್ರ ಮತ್ತಿತರ ಗ್ರಾಮಗಳು.
ಪಿಆರ್‌ಆರ್-2 ಯೋಜನೆಯಡಿಯಲ್ಲಿ ಭೂಮಿ ನೀಡಿದ ರೈತರಿಗೆ ಪರಿಹಾರ ನೀಡುವ ಉದ್ದೇಶದಿಂದ 6 ಹೊಸ ಬಡಾವಣೆಗಳನ್ನು ನಿರ್ಮಿಸಲು ಯೋಜಿಸಲಾಗಿದೆ. ಈ ಕಾರ್ಯಕ್ಕಾಗಿ ಪ್ರಸ್ತುತ ಮೂರು ಸಾವಿರ ಹೆಕ್ಟೇರ್‌ಗಿಂತ ಹೆಚ್ಚು ವ್ಯಾಪ್ತಿಯ ಭೂಮಿಯನ್ನು ಸ್ವಾಧೀನಪಡಿಸುವ ಪ್ರಸ್ತಾವನೆಯಿದ್ದು, ಈ ಪ್ರದೇಶದಲ್ಲಿ ಸರಕಾರಿ ಹಾಗೂ ಖಾಸಗಿ ಭೂಮಿಗಳನ್ನು ಒಳಗೊಂಡಂತೆ ಯೋಜನೆಗೆ ಬಳಸಲಾಗುವುದು.
ಆದರೆ, ʼಪ್ರಸ್ತುತ ಈ ಸಂಬಂಧ ಸರ್ವೆ ಕಾರ್ಯ ಪೂರ್ಣಗೊಳ್ಳಬೇಕಾಗಿದೆ. ಇದಾದ ನಂತರವೇ ಬಿಡಿಎ ಪರಿಹಾರ ದರವನ್ನು ನಿಗದಿಪಡಿಸಲಾಗುವುದುʼ ಎಂದು ಬಿಡಿಎ ಭೂಸ್ವಾಧೀನ ಉಪ ಆಯುಕ್ತ ಜಗದೀಶ್ ತಿಳಿಸಿದ್ದಾರೆ.
ಗೌತಮಿ . M
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿನಿ